

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ಸಂಬಂಧ ಬುಧವಾರ ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಹಾಗೂ ತಂಡ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ಮಾರಾಟ ಮಾಡದಂತೆ ಮಳಿಗೆದಾರರಿಗೆ ಎಚ್ಚರಿಕೆ ನೀಡಲಾಯಿತು.
ಮಲೆಮಹದೇಶ್ವರ ಬೆಟ್ಟವನ್ನು ಈಗಾಗಲೇ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಘೋಷಣೆ ಮಾಡಿದೆ. ಆದರೆ ಭಕ್ತರು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಲ್ಲಿಸಿಲ್ಲ. ನೀರು, ಜ್ಯೂಸ್ ಬಾಟಲಿ, ತಟ್ಟೆ, ಲೋಟ, ಕವರ್ ಇತರ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ಇದರಿಂದ ಶ್ರೀ ಕ್ಷೇತ್ರದ ನೈರ್ಮಲ್ಯಕ್ಕೆ ಧಕ್ಕೆಯಾಗುತ್ತಿತ್ತು. ಜತೆಗೆ ವನ್ಯಜೀವಿಗಳ ಜೀವಕ್ಕೆ ಸಂಚಕಾರವನ್ನು ತಂದೊಡ್ಡುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಶನಿವಾರ ತಾಳುಬೆಟ್ಟದಲ್ಲಿ ಮಲೆಮಹದೇಶ್ವರ ವನ್ಯಜೀವಿ ವಿಭಾಗ ಹಾಗೂ ಪ್ರಾಧಿಕಾರ ಸಹಯೋಗದಲ್ಲಿ ತನಿಖಾ ಠಾಣೆ ಆರಂಭಿಸಿದ್ದು, ಸಿಬ್ಬಂದಿಗೆ ವಾಹನ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆಯುವುದರ ಜತೆಗೆ ಭಕ್ತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಇನ್ನು ಮ.ಬೆಟ್ಟ ಹಾಗೂ ತಾಳುಬೆಟ್ಟದ ಮಳಿಗೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡದಂತೆ ಪ್ರಾಧಿಕಾರ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಮಳಿಗೆದಾರರು ಪಾಲಿಸುತ್ತಿರಲಿಲ್ಲ. ಇದರಿಂದ ಕ್ಷೇತ್ರವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿಸಲು ತೊಡಕಾಗಿ ಪರಿಣಮಿಸಿತ್ತು. ಕಳೆದ ಮೂರು ದಿನಗಳ ಹಿಂದೆ ಮಳಿಗೆದಾರರಿಗೆ ಎಚ್ಚರಿಕೆ ನೀಡಲಾಗಿತ್ತು.
ಬುಧವಾರ ಕಾರ್ಯದರ್ಶಿ ಎ.ಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ತಂಡ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಈ ವೇಳೆ ಮಾರಾಟಕ್ಕಿಟ್ಟಿದ್ದ ನೀರಿನ ಬಾಟಲಿ, ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು. ಹೆಚ್ಚು ಸಂಗ್ರಹಿಸಿರುವ ನೀರಿನ ಬಾಟಲಿಗಳನ್ನು ಕಂಪನಿಗೆ ವಾಪಸ್ ಕಳುಹಿಸುವಂತೆ ಸೂಚನೆ ನೀಡಲಾಯಿತು. ಇನ್ನು ಮುಂದೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡಿದ್ದಲ್ಲಿ ಮೊದಲ ಬಾರಿಗೆ 1 ಸಾವಿರ ರೂ., 2ನೇ ಬಾರಿಗೆ 5 ಸಾವಿರ ರೂ. ದಂಡ ವಿಧಿಸಲಾಗುವುದು. ಮುಂದುವರಿದ್ದಲ್ಲಿ ಗುತ್ತಿಗೆ ಪಡೆದಿರುವ ಮಳಿಗೆಯ ಟೆಂಡರ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ನೀರು ಮಾರಾಟಕ್ಕೆ ಗಾಜಿನ ಬಾಟಲಿ: ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಳುಬೆಟ್ಟದಲ್ಲಿ ತನಿಖಾ ಠಾಣೆಯನ್ನು ತೆರೆಯಲಾಗಿದೆ. ಮ.ಬೆಟ್ಟ ಹಾಗೂ ತಾಳುಬೆಟ್ಟದ ಅಂಗಡಿಗಳಿಗೆ ತೆರಳಿ 1 ಮತ್ತು 2 ಲೀಟರ್‌ನ ನೀರಿನ ಬಾಟಲಿ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ಮಳಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. 5, 10 ಹಾಗೂ 20 ಲೀಟರ್ ನೀರಿನ ಕ್ಯಾನ್ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪ್ಲಾಸ್ಟಿಕ್ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕುವ ಸಂಬಂಧ 3 ತಂಡವನ್ನು ರಚಿಸಲಾಗಿದ್ದು, ಸಿಬ್ಬಂದಿ ಪ್ರತಿದಿನ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ನೀರು ಮಾರಾಟಕ್ಕೆ ಪ್ರಾಧಿಕಾರದ ವತಿಯಿಂದ ಗಾಜಿನ ಬಾಟಲಿಯನ್ನು ನೀಡಲಾಗುವುದು ಎಂದು ತಿಳಿಸಿದರು.