

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ವಿಜಯದಶಮಿ ಅಂಗವಾಗಿ ಗುರುವಾರ ಭಕ್ತರ ದಂಡೇ ಹರಿದು ಬಂತು.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಕಳೆದ ವಾರದಿಂದ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದೆ. ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಆಯುಧ ಪೂಜೆಯಂದು ಹೆಚ್ಚಿನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳು ಸೇವೆ ಹಾಗೂ ಪಂಜಿನ ಸೇವೆಯನ್ನು ನೆರವೇರಿಸಿದರು. ಹುಲಿ, ರುದ್ರಾಕ್ಷಿ ಹಾಗೂ ಬಸವ ಉತ್ಸವಾದಿ ಸೇವೆ ಹಾಗೂ ಚಿನ್ನದ ತೇರಿನ ಉತ್ಸವದಲ್ಲಿ ಭಾಗಿಯಾಗಿದ್ದರು.
ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರ ಸಂಖ್ಯೆ ಹೆಚ್ಚಿತ್ತು. ಮೈಸೂರು ದಸರಾಗೆ ಆಗಮಿಸಿದ್ದ ಪ್ರವಾಸಿಗರು ಹಾಗೂ ಭಕ್ತರ ದಂಡೇ ಮ.ಬೆಟ್ಟಕ್ಕೆ ಹರಿದು ಬಂತು. ಇದರಿಂದ ಮ.ಬೆಟ್ಟದ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ರಾತ್ರಿ ದೇಗುಲದಲ್ಲಿ ಬಿಳಿ ಕುದುರೆ ಉತ್ಸವ, ದೊಡ್ಡಕೆರೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಹಿನ್ನೆಲೆಯಲ್ಲಿ ಬಹುತೇಕ ಭಕ್ತರು ಮ.ಬೆಟ್ಟದಲ್ಲೇ ಬೀಡು ಬಿಟ್ಟಿದ್ದಾರೆ.
ಪ್ರಾಧಿಕಾರದಿಂದ ಅಗತ್ಯ ಸೌಕರ್ಯ: ಮ.ಬೆಟ್ಟಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಿರುವ ಕಾರಣ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕುಡಿಯುವ ನೀರು, ನೆರಳು, ದಾಸೋಹ, ಸುಸೂತ್ರ ದೇವರ ದರ್ಶನ, ಶೌಚಗೃಹ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯ ಕೊರತೆಯಾಗದಂತೆ ಮುತುವರ್ಜಿ ವಹಿಸಿದೆ. ಇನ್ನು ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ದಾಸೋಹ ಭವನದಲ್ಲಿ ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಸಾದ ತಯಾರಿಕೆಯನ್ನು ಪರಿಶೀಲಿಸಿದರು. ರುಚಿ, ಶುಚಿ ಕಾಯ್ದುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು. ಭಕ್ತರಿಗೆ ಸ್ವತಃ ಪ್ರಸಾದವನ್ನು ವಿತರಿಸಿದರು.
ಪ್ರವಾಸಿಗರ ಚಿತ್ತ ಹೊಗೇನಕಲ್ ಫಾಲ್ಸ್‌ನತ್ತ: ಮೈಸೂರು ದಸರಾಗೆ ಆಗಮಿಸಿದ ಪ್ರವಾಸಿಗರು ಅದರಲ್ಲೂ ಅಧಿಕಾರಿಗಳು, ನೌಕರರು ಕಳೆದ ಎರಡು ದಿನಗಳಿಂದ ಸರ್ಕಾರಿ ರಜೆ ಇರುವ ಕಾರಣದಿಂದ ಖಾಸಗಿ ವಾಹನಗಳಲ್ಲಿ ಮ.ಬೆಟ್ಟದ ಮಾದಪ್ಪನ ಸನ್ನಿಧಿಗೂ ಭೇಟಿ ನೀಡಿದ್ದರು. ಇದರಲ್ಲಿ ಬಹುತೇಕ ಪ್ರವಾಸಿಗರು ಹೊಗೇನಕಲ್ ಫಾಲ್ಸ್‌ನತ್ತ ಚಿತ್ತ ಹರಿಸಿ ತೆಪ್ಪ ವಿಹಾರಕ್ಕೆ ತೆರಳಿ ಫಾಲ್ಸ್‌ನ ರುದ್ರ ರಮಣಿಯ ಹಾಗೂ ಪ್ರಾಕೃತಿಕ ಸೊಬಗನ್ನು ಸವಿದರು. ಹಾಗಾಗಿ ಹೊಗೇನಕಲ್ ಫಾಲ್ಸ್‌ಗೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದರು. ಮೈಸೂರಿನಲ್ಲಿ ಜಂಬೂ ಸವಾರಿ ಮುಗಿದ ಬಳಿಕ ಪ್ರತಿ ವರ್ಷದಂತೆ ಫಾಲ್ಸ್‌ಗೆ ಹೆಚ್ಚಿನ ಪ್ರವಾಸಿಗರು ಭೇಟ ನೀಡುವ ಸಾಧ್ಯತೆ ಇದೆ.