

ಹನೂರು: ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಾಗಿ (ಟೈಗರ್ ಪ್ರಾಜೆಕ್ಟ್) ಘೋಷಣೆಗೆ ಸಿಎಂ ಬಸವರಾಜ ಬೊಮ್ಮಯಿ ಅವರು ಗುರುವಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸದ್ಯದಲ್ಲಿಯೇ ಆದೇಶ ಜಾರಿಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ನಾಗರಹೊಳೆ, ಭದ್ರ, ದಾಂಡೇಲಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಇದರಲ್ಲಿ ಚಾಮರಾಜನಗರ ಜಿಲ್ಲೆಯೊಂದರಲ್ಲೇ ಬಿಳಿಗಿರಿರಂಗನಾಥ ಸ್ವಾಮಿ (ಬಿಆರ್‌ಟಿ) ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿದ್ದು, ಒಟ್ಟು 5 ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಈ ನಡುವೆ ಹನೂರು ತಾಲೂಕಿನಲ್ಲಿ ಹೆಚ್ಚಾಗಿ ಕಾವೇರಿ ವನ್ಯಜೀವಿಧಾಮದೊಂದಿಗೆ ಬೆಸೆದುಕೊಂಡಿರುವ ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿದ್ದು, ಸುಮಾರು 25ಕ್ಕೂ ಹೆಚ್ಚು ಹುಲಿಗಳಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ರೂಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ರೂಪುರೇಷಗಳನ್ನು ಸಿದ್ಧಪಡಿಸಿ 2018 ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಈ ದಿಸೆಯಲ್ಲಿ 2022, ಮಾ.12ರಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಸರ್ಕಾರದಿಂದ ಒಪ್ಪಿಗೆಯೂ ದೊರೆತಿತ್ತು. ಆದರೆ ಈ ಪ್ರದೇಶದಲ್ಲಿ ನೆಲೆಸಿರುವ ಜನರು ಅದರಲ್ಲೂ ಗಿರಿಜನರು, ಬೇಡಗಂಪಣರಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತಲ್ಲದೇ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶಾಸಕ ಆರ್.ನರೇಂದ್ರ ಅವರಿಂದಲೂ ವಿರೋಧವಿತ್ತು. ಹಾಗಾಗಿ ಕಾರಣಾಂತರದಿಂದ ಯೋಜನೆಯ ಅನುಷ್ಠಾನದ ವಿಚಾರ ನನೆಗುದಿಗೆ ಬಿದ್ದಿತ್ತು.
ನಿಟ್ಟುಸಿರು ಬಿಟ್ಟಿದ್ದ ಜನತೆ: ಆಗಸ್ಟ್ 3 ರಂದು ಪೊನ್ನಾಚಿ ಗ್ರಾಮದಲ್ಲಿ ನಡೆದ ಸಾಲೂರು ಮಠದ ಶ್ರೀ ಗುರುಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಮಾತನಾಡಿ, ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಯಾವುದೇ ಕಾರಣಕ್ಕೂ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವನ್ನಾಗಿ ಘೋಷಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಬಿಡುವುದಿಲ್ಲ. ಈ ಯೋಜನೆಯ ಘೋಷಣೆಯ ಬಗ್ಗೆ ನನ್ನ ವಿರೋಧವೂ ಇದೆ. ಹಾಗಾಗಿ ನಿಶ್ಚಿಂತೆಯಿಂದಿರಿ ಎಂದು ಅಭಯ ನೀಡಿದ್ದರಿಂದ ಜನತೆ ಕೊಂಚ ನಿಟ್ಟುಸಿರುಬಿಟ್ಟಿದ್ದರು.
ಮತ್ತೆ ಆತಂಕ ಶುರು: ಬೆಂಗಳೂರಿನಲ್ಲಿ ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ವನ್ಯಜೀವಿ ಮಂಡಳಿಯ 16 ಸಭೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಅವರು ವಿಷಯ ಪ್ರಸ್ತಾಪಿಸಿ, ಮಲೆಮಹದೇಶ್ವರ ಟೈಗರ್ ಪ್ರಾಜೆಕ್ಟ್‌ಗೆ ಈಗಾಗಲೇ ಸಂಪುಟದಲ್ಲಿ ಅನುಮೋದನೆ ನೀಡಿದೆ. ಆದರೆ, ಆದೇಶ ಮಾತ್ರ ಜಾರಿಯಾಗಬೇಕಿದೆ ಎಂದು ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ಈ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲು ಅಧಿಸೂಚನೆ ಹೊರಡಿಸಲಾಗುವುದು ಎಂದು ಉತ್ತರಿಸಿದ್ದಾರೆ. ಇದರಿಂದ ಜನತೆಯಲ್ಲಿ ಇದೀಗ ಮತ್ತೆ ಆತಂಕ ಶುರುವಾಗಿದೆ. ಹಾಗಾಗಿ, ಈ ಆದೇಶ ಯಾವಾಗ ಜಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.