ಮ.ಬೆಟ್ಟ, ಹನೂರು ಸೇರಿದಂತೆ ಹಲವೆಡೆ ಮಳೆ

03 HANUR 2 A
Published on

ಹನೂರು: ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆಯಾಗಿದೆ. ಹೊಸ ಸಂವತ್ಸರದ ಆರಂಭದ ಮೊದಲನೆ ಮಳೆ ಇದಾಗಿದ್ದು, ರೈತಾಪಿ ವರ್ಗದಲ್ಲಿ ಸಂತಸ ಮೂಡಿದೆ.

ಮ.ಬೆಟ್ಟದಲ್ಲಿ ಬೆಳಗಿನ ಜಾವ 5.30ರಲ್ಲಿ ಹಾಗೂ ಮಧ್ಯಾಹ್ನ 1ರಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಸಾಧಾರಣ ಮಳೆ ಸುರಿದರೆ, ಬೆಳಗ್ಗೆಯಿಂದ ಹೆಚ್ಚು ತಾಪಮಾನದಿಂದ ಕೂಡಿದ್ದ ಹನೂರು ಪಟ್ಟಣ ಸೇರಿದಂತೆ ಕೌದಳ್ಳಿ, ಮಲ್ಲಯ್ಯನಪುರ, ಸತ್ತಾರಮೇಡು, ಮಂಗಲ, ಕಣ್ಣೂರು, ಆನಾಪುರ, ಗುಂಡಾಪುರ ಹಾಗೂ ಈ ಭಾಗದ ಇನ್ನಿತರೆ ಕಡೆಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಸುಮಾರು ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆಯಾಯಿತು. ಲೊಕ್ಕನಹಳ್ಳಿ ಹೋಬಳಿ ಭಾಗದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಇದರಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪು ಅನುಭವ ನೀಡಿದರೆ, ವರ್ಷದ ಮುಂಗಾರು ರೈತರಲ್ಲಿ ಹರ್ಷ ತಂದಿದೆ.

ರಸ್ತೆ ಮೇಲೆ ಹರಿದ ಕೊಳಚೆ ನೀರು: ಮ.ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆಯ ಕೌದಳ್ಳಿಯಲ್ಲಿ ಮಳೆಯಾದ್ದರಿಂದ ಮಳೆ ನೀರು ಚರಂಡಿಯ ಕೊಳಚೆ ನೀರಿನೊಂದಿಗೆ ಬೆರೆತು ಮುಖ್ಯ ರಸ್ತೆಯಲ್ಲಿ ಹರಿಯಿತು. ನೀರು ಸರಾಗವಾಗಿ ಹರಿಯುವುದಕ್ಕೆ ತಡೆಯಾಗಿದ್ದ ಕಸಕಡ್ಡಿಗಳನ್ನು ಸ್ಥಳೀಯರು ತೆರೆವುಗೊಳಿಸಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net