

ಚಿತ್ರದುರ್ಗ: ಭ್ರೂಣ ಲಿಂಗ ಪತ್ತೆ ಅಥವಾ ಹತ್ಯೆ ಕುರಿತು ಮಾಹಿತಿ ನೀಡಿದವರಿಗೆ 1ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ಡಿಎಚ್‌ಒ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಬಹುಮಾನವಾಗಿ ನೀಡುತ್ತಿದ್ದ 50 ಸಾವಿರ ರೂ. ಮೊತ್ತವನ್ನು 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಮಾಹಿತಿದಾರರ ವಿವರ ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ಅನ್ಯರ ಪ್ರವೇಶ ನಿಷೇಧ: ಸ್ಕಾೃನಿಂಗ್ ಕೊಠಡಿಯೊಳಗೆ ಗರ್ಭಿಣಿಯರ ಕುಟುಂಬ ವರ್ಗ, ಇತರೆ ಸಹಾಯಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿ ಸರ್ಕಾರ ಆದೇಶಿಸಿದೆ. ಇದರ ಜೊತೆಗೆ ಯಂತ್ರಕ್ಕೆ ಹೆಚ್ಚುವರಿಯಾಗಿ ಕಂಪ್ಯೂಟರ್ ಮಾನಿಟರ್ ಅಳವಡಿಸುವುದನ್ನು ನಿಷೇಧಿಸಿದೆ. ಈ ಕುರಿತು ಮಾಹಿತಿ ಫಲಕ ಕೇಂದ್ರಗಳಲ್ಲಿ ಪ್ರದರ್ಶಿಸಬೇಕು. ತಪ್ಪದೇ ಪಾಲಿಸುವಂತೆ ಸೂಚಿಸಿದರು.
ಸಮಿತಿ ರಚನೆ: ಪಿಸಿಪಿಎನ್‌ಡಿಟಿ ಕಾಯ್ದೆ ಅನುಸಾರ ಸಲಹಾ ಸಮಿತಿ ಪುನರ್ ರಚಿಸಲಾಯಿತು. ಡಾ.ಸೌಮ್ಯಾ (ಅಧ್ಯಕ್ಷೆ), ಡಾ.ರೇಣುಪ್ರಸಾದ್ (ಸದಸ್ಯ ಕಾರ್ಯದರ್ಶಿ), ಡಾ.ದೇವರಾಜು, ಡಾ.ಸತ್ಯನಾರಾಯಣ (ಸದಸ್ಯರು), ವಕೀಲ ಉಮೇಶ್ (ಕಾನೂನು ಸಲಹೆಗಾರ), ಜಿಲ್ಲಾ ವಾರ್ತಾಧಿಕಾರಿ, ಸರ್ಕಾರಿ ಅಭಿಯೋಜಕರು, ಸರ್ಕಾರೇತರ ಸ್ವಯಂ ಸೇವಾ ಸಂಘದ ಮೀನಾಕ್ಷಿ, ಗಾಯತ್ರಿ ಶಿವರಾಂ, ಜಿ.ಎಸ್.ಗೌಡ ಕೂಡ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಹೊಸ ಅಲ್ಟ್ರಾಸೌಂಡ್ ಸ್ಕಾೃನಿಂಗ್ ಸೆಂಟರ್ ತೆರೆಯಲು, ನೋಂದಣಿ ನವೀಕರಣ, ವಿಳಾಸ ಬದಲಾವಣೆ, ಅವಧಿ ವಿಸ್ತರಣೆಗೆ ಅನುಮತಿ ನೀಡಲಾಯಿತು. ಆದರೆ, ತಜ್ಞ ರೇಡಿಯಾಲಜಿಸ್ಟ್ ಇಲ್ಲದ ಕಾರಣ ಕೆಲ ಹೊಸ ಅರ್ಜಿಗಳನ್ನು ತಿರಸ್ಕರಿಸಲಾಯಿತು.
ಸಮಿತಿ ಅಧ್ಯಕ್ಷೆ ಡಾ.ಎಸ್.ಸೌಮ್ಯಾ, ಸದಸ್ಯರಾದ ಡಾ.ಸತ್ಯನಾರಾಯಣ, ಎಂ.ಉಮೇಶ್, ಕೆ.ಪಿ.ಮೀನಾಕ್ಷಿ ಇತರರಿದ್ದರು.