

ಪಾಂಡವಪುರ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಭ್ರೂಣ ಲಿಂಗ ಪತ್ತೆ ಮಾಡುವುದು ಮತ್ತು ಅದಕ್ಕೆ ಸಹಕರಿಸುವುದು ಕಾನೂನು ಬಾಹಿರ. ಹೀಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಥಾ ನಡೆಸಲಾಗುತ್ತಿದೆ ತಹಸೀಲ್ದಾರ್ ಜಿ.ಎಸ್.ಶ್ರೇಯಸ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಉಪವಿಭಾಗೀಯ ಆಸ್ಪತ್ರೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ವಿಚಾರವಾಗಿ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಅಗತ್ಯವಿದೆ. ಪ್ರಸ್ತುತ ಪುರಸಭೆ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಸ್ಪತ್ರೆ ಶುಶ್ರೂಷಕಿಯರ ಸಹಕಾರದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲೂ ಜಾಥಾ ಆಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಉಪವಿಭಾಗೀಯ ಆಸ್ಪತ್ರೆ ಆಡಳತಾಧಿಕಾರಿ ಡಾ.ಸಿ.ಎ.ಅರವಿಂದ ಮಾತನಾಡಿ, ತಾಲೂಕಿನಲ್ಲಿ ಎಲ್ಲಿಯೇ ಸ್ಕ್ಯಾನಿಂಗ್ ಸೆಂಟರ್ ತೆರೆದರೂ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಇಂತಹ ಸೆಂಟರ್‌ಗಳಲ್ಲಿ ಲಿಂಗ ಪತ್ತೆ ಮಾಡುವುದು ಅಪರಾಧ. ಇಂತಹ ಕೃತ್ಯಗಳು ಕಂಡುಬಂದರೆ ಸಾರ್ವಜನಿಕರು ದೂರು ನೀಡುವ ಮೂಲಕ ಭ್ರೂಣ ಹತ್ಯೆಯ ಪಾಪದ ಕೆಲಸಗಳಿಗೆ ತಡೆಯೊಡ್ಡಬೇಕು ಎಂದು ಮನವಿ ಮಾಡಿದರು.
ತಾಪಂ ಇಒ ಲೋಕೇಶ್‌ಮೂರ್ತಿ, ಟಿಎಚ್‌ಒ ಧನಂಜಯ, ಸಿಡಿಪಿಒ ಪೂರ್ಣಿಮಾ, ಎಸ್‌ಐ ಉಮೇಶ್, ಹಿರಿಯ ಆರೋಗ್ಯ ನಿರೀಕ್ಷಕ ಪುಟ್ಟಸ್ವಾಮಿ ಇತರರು ಇದ್ದರು.