ಮೈಸೂರು: ನಗರದ ಬನ್ನೂರು ರಸ್ತೆಯ ಐಶಾರಾಮಿ ಮನೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಭ್ರೂಣ ಹತ್ಯೆಯ ಸಂಪೂರ್ಣ ಜಾಲವನ್ನು ಪತ್ತೆ ಹಚ್ಚಿ ಮತ್ತು ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಆಗ್ರಹಿಸಿದೆ.
ಹೆಣ್ಣು ಭ್ರೂಣ ಹತ್ಯೆ ಮೂಲಕ ಲಕ್ಷಾಂತರ ರೂ. ಗಳಿಸುವ ದಂಧೆಯು ಬಯಲಾಗಿದೆ. ನಗರದ ಬನ್ನೂರು ರಸ್ತೆಯ ಹುನುಗನಹಳ್ಳಿಯಿಂದ ಒಂದು ಕಿ.ಮೀ.ದೂರದಲ್ಲಿರುವ ಈ ಮನೆಯಲ್ಲಿ ಸುತ್ತಲೂ ಹತ್ತು ಅಡಿ ಕಾಂಪೌಂಡ್ ಇದ್ದು, ಒಳಗಿನ ಚಟುವಟಿಕೆಗಳು ಯಾರಿಗೂ ತಿಳಿಯದಂತೆ ರಹಸ್ಯ ಕಾಪಾಡಲಾಗಿದೆ.
ಸ್ಕ್ಯಾನಿಂಗ್ ಯಂತ್ರವಲ್ಲದೆ ಭ್ರೂಣ ಹತ್ಯೆಗೆ ಅವಶ್ಯ ಇರುವ ಪರಿಕರ ಪತ್ತೆಯಾಗಿವೆ ಎಂದು ವರದಿಯಾಗಿರುವುದು ಆಘಾತಕಾರಿ ಎಂದು ಸಂಘಟನೆಯ ಜಿಲ್ಲಾ ಸಮಿತಿಯ ಅಧ್ಯಕ್ಷೆ ನಳಿನಾ, ಜಿಲ್ಲಾ ಕಾರ್ಯದರ್ಶಿ ಆಸಿಯಾ ಬೇಗಂ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಗರ್ಭಿಣಿಯರನ್ನು ಈ ಮನೆಗೆ ಕರೆತಂದು, ಭ್ರೂಣ ಯಾವುದು ಎಂದು ಪತ್ತೆ ಹಚ್ಚಲಾಗುತ್ತಿತ್ತು. ನಂತರ ಗಂಡು ಲಿಂಗ ಪತ್ತೆ ಮಾಡಿದರೆ, 25,000 ರೂ. ವಸೂಲಿ ಮಾಡುತ್ತಿದ್ದರು. ಹೆಣ್ಣು ಭ್ರೂಣವಾದರೆ ಅದರ ಹತ್ಯೆಗೆ 30,000 ರೂ. ವಸೂಲಿ ಮಾಡುತ್ತಿದ್ದರು ಎಂಬ ಆಘಾತಕಾರಿ ವಿಷಯವೂ ಬೆಳಕಿಗೆ ಬಂದಿದೆ.
ಈ ಕೃತ್ಯ ಬನ್ನೂರಿನ ಖಾಸಗಿ ಆಸ್ಪತ್ರೆಯೊಂದರ ಮಾಲಿಕರಿಂದಲೇ ನಡೆದಿರಬಹುದು ಎಂದು ವರದಿಯಾಗಿದೆ. ಈ ಕೃತ್ಯದಲ್ಲಿ ಗ್ರಾಹಕರ ರೀತಿ ಗರ್ಭಿಣಿಯರನ್ನು ಹುಡುಕಿ ಕೊಡುವ ಅಥವಾ ಗರ್ಭಿಣಿಯರು, ಅವರ ಮನೆಯವರಿಗೆ ಗರ್ಭಪಾತ ಮಾಡಿಸುವ ಕೇಂದ್ರಗಳ ಬಗ್ಗೆ ಮಾಹಿತಿ ಕೊಡುವ ಏಜೆಂಟರ್‌ಗಳಿದ್ದಾರೆ.
ಜತೆಗೆ ಈ ದುಷ್ಕೃತ್ಯದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಆಸ್ಪತ್ರೆಗಳು, ವೈದ್ಯರು, ಟೆಕ್ನಿಷಿಯನ್‌ಗಳು ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ನಿಯಮ ಮತ್ತು ಕ್ರಮ ಜಾರಿಗೆ ತರಬೇಕೆಂದೂ ಆಗ್ರಹಿಸಿದ್ದಾರೆ.