ಭ್ರೂಣ ಲಿಂಗ ಪತ್ತೆ ನರ್ಸಿಂಗ್​ ಹೋಂಗೆ ಬೀಗ

30_10_
Published on

ಬೂದಿಕೋಟೆ:ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ನರ್ಸಿಂಗ್​ ಹೋಂ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಯಂತ್ರವನ್ನು ವಶಪಡಿಸಿಕೊಂಡು ನರ್ಸಿಂಗ್​ ಹೋಂಗೆ ಬೀಗಮುದ್ರೆ ಹಾಕಿದ್ದಾರೆ.

ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿಯ ದೀಪಕ್​ ನರ್ಸಿಂಗ್​ ಹೋಂನಲ್ಲಿ ಕಳೆದ 6 ತಿಂಗಳಿಂದ ಡಾ.ಸರಸ್ವತಿ ಎಂಬುವವರು ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಂಗ್ರಹಿಸಿದ ಪಿಸಿಪಿಎನ್​ಡಿಪಿ ಅಧಿಕಾರಿಗಳು ಮಂಗಳವಾರ ಸ್ಟಿಂಗ್​ ಆಪರೇಷನ್​ ಮೂಲಕ ಬಲೆ ಬೀಸಿದ್ದಾರೆ. ಬೆಂಗಳೂರು ಪಿಸಿಪಿಎನ್​ಡಿಪಿಯ ಉಪ ನಿರ್ದೇಶಕ ಡಾ.ವಿವೇಕ್​ ದೊರೈ ನೇತೃತ್ವದ ಅಧಿಕಾರಿಗಳ ತಂಡವು, ಗರ್ಭಿಣಿ ಮಹಿಳೆಯನ್ನು ಕರೆದುಕೊಂಡು ಹೋಗಿ ಭ್ರೂಣ ಲಿಂಗ ಪತ್ತೆ ಮಾಡುವಂತೆ ಕೇಳಿದ್ದಾರೆ. ಅದರಂತೆ ಭ್ರೂಣ ಲಿಂಗ ಪತ್ತೆ ಮಾಡಿ ವರದಿ ನೀಡುತ್ತಿದ್ದಂತೆ ಅಧಿಕಾರಿಗಳು ತೋಡಿದ ಖೆಡ್ಡಾಗೆ ಡಾ.ಸರಸ್ವತಿ ಹಾಗೂ ಇತರರು ಬಿದ್ದಿದ್ದಾರೆ.

ದಾಳಿ ಮಾಡಿದ ಅಧಿಕಾರಿಗಳು ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಯಂತ್ರ, ನಗದು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ನಡೆಯುತ್ತಿದ್ದಂತೆ ಪರಾರಿಯಾಗಿದ್ದ ಡಾ.ಸರಸ್ವತಿ ನಂತರ ಬಂದು ತಪ್ಪೊಪ್ಪಿಕೊಂಡಿದ್ದಾರೆ. ಅಧಿಕಾರಿಗಳು ಡಾ.ಸರಸ್ವತಿ ವಿರುದ್ಧ ದೂರು ದಾಖಲಿಸಿಕೊಂಡು ನರ್ಸಿಂಗ್​ ಹೋಂಗೆ ಬೀಗ ಜಡಿದಿದ್ದಾರೆ.

ಪಿಸಿಪಿಎನ್​ಡಿಪಿಯ ಉಪ ನಿರ್ದೇಶಕ ಡಾ.ವಿವೇಕ್​ ದೊರೈ ಮಾತನಾಡಿ, ಎರಡು ವರ್ಷಗಳ ಹಿಂದೆ ದೀಪಕ್​ ನರ್ಸಿಂಗ್​ ಹೋಂನಲ್ಲಿ ಭ್ರೂಣ ಲಿಂಗ ಪತ್ತೆ ಮಾಡುತ್ತಿರುವ ಬಗ್ಗೆ ದೂರು ಬಂದಾಗ ದೆಹಲಿಯಿಂದ ಬಂದ ಅಧಿಕಾರಿಗಳು ನರ್ಸಿಂಗ್​ ಹೋಂ ಮೇಲೆ ದಾಳಿ ಮಾಡಿ ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಯಂತ್ರವನ್ನು ವಶಕ್ಕೆ ಪಡೆದು ನರ್ಸಿಂಗ್​ ಹೋಂಗೆ ಬೀಗ ಜಡಿದು ದೂರು ದಾಖಲಿಸಲಾಗಿತ್ತು. ಈಗ ಮತ್ತೆ ಯಾವುದೇ ಪರವಾನಗಿ ಪಡೆಯದೇ ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಟಿಂಗ್​ ಆಪರೇಷನ್​ ಮೂಲಕ ಕಂಡು ಹಿಡಿಯಲಾಗಿದೆ. ಡಾ.ಸರಸ್ವತಿ ವಿರುದ್ಧ ದೂರು ದಾಖಲಿಸಿದ್ದು, ನರ್ಸಿಂಗ್​ ಹೋಂ ಸೀಸ್​ ಮಾಡಲಾಗಿದೆ. ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಎಲ್ಲಿಯಾದರೂ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಂದನ್​, ರೆಡಿಯಾಲಜಿಸ್ಟ್​ ಡಾ.ರಾಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net