

ಬೆಳಗಾವಿ: ಭ್ರ್ರಾತೃತ್ವ ಭಾವನೆ ಮೂಡಿಸಿ, ಎಲ್ಲರನ್ನೂ ಸ್ವಾತಂತ್ರ್ಯ ಚಳವಳಿಯಲ್ಲಿ ಜೋಡಿಸಿಕೊಂಡು ರಾಷ್ಟ್ರೀಯ ಚಳವಳಿಯಲ್ಲಿ ಒಗ್ಗೂಡಿಸಿದ ಅಧಿವೇಶನ ಇದಾಗಿತ್ತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬೆಳಗಾವಿ ಕನ್ನಡ ಭವನದಲ್ಲಿ ಭಾನುವಾರ ರಂಗಸೃಷ್ಟಿ ಮತ್ತು ಭಾಗವತರು ಸಂಘಟನೆ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕರ್ನಾಟಕದ ಕಲ್ಪನೆ ಸಮರ್ಪಕವಾಗಿ ಬಂದಿದ್ದೇ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಮೂಲಕ. ಇಲ್ಲಿ ಹಾಡಿದ ಉದಯವಾಗಲಿ ಚೆಲುವ ಕನ್ನಡನಾಡು ಗೀತೆ ಎಲ್ಲರನ್ನೂ ಒಗ್ಗೂಡಿಸಿತು ಎಂದರು.
ಎಂತಹ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಎಂತಹ ಸಂದೇಶ ನೀಡಿದರು ಎನ್ನುವುದನ್ನು ಅರಿತವರು ಈ ಕಾರ್ಯಕ್ರಮ ಒಪ್ಪಿ, ಅಪ್ಪಿಕೊಳ್ಳುತ್ತಾರೆ. ರಾಷ್ಟ್ರ ಹೇಗೆ ಕಟ್ಟಬೇಕು, ರಾಷ್ಟ್ರದಲ್ಲಿ ನಾವು ಹೇಗಿರಬೇಕು ಎನ್ನುವ ಜತೆಗೆ, ಜನರಲ್ಲಿ ಸಚ್ಚಾರಿತ್ರ್ಯ ಮೂಡಿಸಬೇಕು ಎನ್ನುವ ಸಂದೇಶ ಅಧಿವೇಶನ ನೀಡಿತು. ಅಸ್ಪೃಶ್ಯತೆ ತಡೆಯುವುದನ್ನೇ ಮೂಲಮಂತ್ರವಾಗಿಸಿಕೊಂಡು ಅಧಿವೇಶನ ನಡೆಸಲಾಯಿತು ಎಂದು ಹೇಳಿದರು.
ಗಾಂಧಿ ಹೆಸರಲ್ಲಿ ಕಾರ್ಯಕ್ರಮ: ಸರ್ಕಾರದಿಂದ ವರ್ಷವಿಡೀ ಗಾಂಧಿ ಭಾರತ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರ ಮೂಲಕ ಗಾಂಧಿ ಅನುಯಾಯಿಗಳಲ್ಲಿ ಬಲ ತುಂಬುವಂತಹ ಕೆಲಸ, ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಗಾಂಧಿ ಪುತ್ಥಳಿ ಪ್ರತಿಷ್ಠಾಪನೆ, ಖಾದಿ ಪ್ರದರ್ಶನ, ಸಾರ್ವಜನಿಕ ಸಮಾವೇಶ ಮೊದಲಾದವು ನಡೆ ಯಲಿವೆ. ಜನರನ್ನು ಒಂದಿಲ್ಲೊಂದು ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ ಎಚ್.ಕೆ.ಪಾಟೀಲ ಹೇಳಿದರು.
ಸಂಸ್ಥೆ ಕಾರ್ಯ ಶ್ಲಾಘನೀಯ: ಇತಿಹಾಸದ ಸ್ಮರಣೆ ನಡೆಯುತ್ತಿರಬೇಕು. ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಂಡವರ ಕುರಿತು ತಿಳಿದು ಕೊಳ್ಳಬೇಕು. ಅಂದಿನ ಮೌಲ್ಯ, ಆರ್ಥಿಕ ಶಿಸ್ತು ಇಂದಿಗೂ ಪ್ರಸ್ತುತ. ರಂಗಸೃಷ್ಟಿ ಮತ್ತು ಭಾಗವತರು ಎರಡೂ ಸಂಸ್ಥೆಯ ಕಾರ್ಯಕ್ಕೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ಅಂದಿನ ಅಧಿವೇಶನ ನೆನಪು ಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು ಮೆಚ್ಚುವಂತದ್ದು. ನಾಟಕಗಳ ಮೂಲಕ ಇಲ್ಲಿ ಜಾಗೃತಿ ಮಾಡುತ್ತಿದ್ದೀರಿ. ಬರುವ ಒಂದು ವರ್ಷದಲ್ಲಿ 40-50 ಪ್ರಯೋಗ ಮಾಡಿದರೆ ಬಹಳ ದೊಡ್ಡ ಬದಲಾವಣೆ ಸಾಧ್ಯ ಎಂದು ಎಚ್‌ಕೆಪಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಗಾಂಧೀಜಿ ಎಂದರೆ ಸತ್ಯ, ನ್ಯಾಯ, ಪ್ರಾಮಾಣಿಕತೆ. ಹಾಗಾಗಿಯೇ ಶತಮಾನಗಳ ಕಾಲ ಅವರನ್ನು ಸ್ಮರಿಸುತ್ತೇವೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಈ ಕಾರ್ಯಕ್ರಮ ಮುನ್ನುಡಿಯಾಗಲಿ. ಹೊಸ ಆಶಾಭಾವನೆಯೊಂದಿಗೆ ನಾವು ಬದುಕೋಣ ಎಂದರು.
ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಡಾ.ರಾಮಕೃಷ್ಣ ಮರಾಠೆ ಅವರ ರಂಗಭೂಮಿಯ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಬಿಡುಗಡೆ ಮಾಡಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್, ಭಾಗವತರು ಸಂಸ್ಥೆಯ ಅಧ್ಯಕ್ಷ ಕೆ.ರೇವಣ್ಣ, ರಂಗಸೃಷ್ಟಿಯ ಉಪಾಧ್ಯಕ್ಷ ಎಂ.ಕೆ. ಹೆಗಡೆ, ರಂಗಸೃಷ್ಟಿಯ ಸದಸ್ಯ ಡಾ.ರಾಮಕೃಷ್ಣ ಮರಾಠೆ, ಶಿರೀಶ್ ಜೋಶಿ, ಶಾಂತಾ ಆಚಾರ್ಯ, ಬಸವರಾಜ ಗಾರ್ಗಿ, ಶರಣಗೌಡ ಪಾಟೀಲ ಇದ್ದರು. ಶಿವಲಿಂಗ ಪ್ರಸಾದ ನಿರೂಪಿಸಿದರು. ಶರಣಯ್ಯ ಮಠಪತಿ ವಂದಿಸಿದರು. ನಂತರ ಸಂಜೆಯವರೆಗೆ ವಿಚಾರಗೋಷ್ಠಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರಿಗೆ ರಂಗಗೌರವ, ಶಿರೀಶ ಜೋಶಿ ಅವರು ಬರೆದ ನಾಟಕ ‘ಪ್ರಿಂಟಿಂಗ್ ಮಶಿನ್’ ಪ್ರದರ್ಶನ ನಡೆಯಿತು.