ಭ್ರಷ್ಟಾಚಾರವನ್ನು ಬಗ್ಗುಬಡಿಯುವ ಗುಣ ಬೆಳೆಸಿಕೊಳ್ಳಿ

JULY-2025-17-03
Published on

ಮದ್ದೂರು: ದುರಾಸೆಯೆಂಬ ರೋಗವನ್ನು ಹೋಗಲಾಡಿಸುವ ಜತೆಗೆ ಭ್ರಷ್ಟಾಚಾರವನ್ನು ಬಗ್ಗುಬಡಿಯುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ಹೆಗ್ಡೆ ಕರೆ ನೀಡಿದರು.

ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್.ಕೆ.ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಹುದ್ದೆಯಲ್ಲಿದ್ದರೂ ಪ್ರಾಮಾಣಿಕತೆಯೊಟ್ಟಿಗೆ ಕರ್ತವ್ಯ ನಿರ್ವಹಿಸುವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಬೇಕೆಂದ ಅವರು ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವಂತೆ ಹೇಳಿದರು.

ವಿದ್ಯಾರ್ಥಿಗಳು ಐಫೋನ್‌ನಂತಹ ದುಬಾರಿ ವಸ್ತುಗಳ ಚಟ ಬದಿಗಿಟ್ಟು, ಪಾಲಕರು ಮತ್ತು ಕುಟುಂಬ ಸದಸ್ಯರ ಜತೆ ಸಮಯ ಕಳೆಯುವುದರ ಜತೆಗೆ ಸಹಾಯ ಹಸ್ತ ಮನೋಭಾವ ರೂಢಿಸಿಕೊಳ್ಳುವಂತೆ ಸೂಚಿಸಿದರು.

ಸಾಹಿತಿ, ಚಿಂತಕ ಪ್ರೊ. ಕೃಷ್ಣೇಗೌಡ ಮಾತನಾಡಿ, ಹಿರಿಯರ ತತ್ವ ಆದರ್ಶಗಳು ವಿದ್ಯಾರ್ಥಿ ದಿಸೆಯಲ್ಲೇ ಮೈಗೂಡಿಸಿಕೊಂಡಾಗ ಸ್ವಚ್ಛ, ಸಮೃದ್ಧ ಮನಸ್ಸು ತಮ್ಮದಾಗುವುದರ ಜತೆಗೆ ಶೈಕ್ಷಣಿಕ ಉನ್ನತಿಯು ಲಭಿಸಿ ಭವಿಷ್ಯದ ಬದುಕಿನಲ್ಲಿ ಧನಲಕ್ಷ್ಮೀ ನಮ್ಮ ಹಿಂದೆಯೇ ಬರುವುದಾಗಿ ಹಾಸ್ಯಮಿಶ್ರಿತವಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಕೆ.ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿನಯ ರಾಮಕೃಷ್ಣ, ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನಾ ಆರ್.ನಿಖಿಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸಂಸ್ಥೆಯ ಹೊರ ಆವರಣದಲ್ಲಿ ನಿವೃತ್ತ ನ್ಯಾಯಾಧೀಶ ಸಂತೋಷ್‌ಹೆಗ್ಡೆ, ಸಾಹಿತಿ ಕೃಷ್ಣೇಗೌಡ ಮತ್ತು ಸಂಸ್ಥೆಯ ಪದಾಧಿಕಾರಿಗಳು ಗಿಡ ನೆಟ್ಟು ನೀರೆರದರು.

ಆರ್.ಕೆ. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಮಂಡಳಿ ಸಲಹಾ ಸಮಿತಿಯ ಸದಸ್ಯರಾದ ಡಾ.ಎಸ್.ತುಕಾರಾಂ, ಎಚ್.ಎನ್.ಶಿವಣ್ಣಗೌಡ, ಪ್ರಾಂಶುಪಾಲರು, ಮುಖ್ಯಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net