ಭ್ರಷ್ಟಾಚಾರದಲ್ಲಿ ಕೈ ಮೇಲುಗೈ

BJP
Published on

ಚಿತ್ರದುರ್ಗ: ಕಾಂಗ್ರೆಸ್ ನಾಯಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರೆ, ನೂರಾರು ಕೋಟಿ ಹಣ ಸಿಗುತ್ತಿದೆ. ಅಕ್ರಮ ಆಸ್ತಿ ಹೊಂದುವುದರಲ್ಲಿ ಈ ಪಕ್ಷದವರು ನಿಸ್ಸಿಮರು ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಒನಕೆ ಓಬವ್ವ ವೃತ್ತದ ಮುಂಭಾಗ ಪ್ರತಿಭಟನೆ ನಡೆಸಿದರು.

ಬಾಯಿ ಮಾತಿನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವೆಂದು ಘೋಷಿಸಿ ಭಾರತ್ ಜೋಡೋ ಯಾತ್ರೆ ನಡೆಸಿದ ಆ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಧಿಕ್ಕಾರ, ಅಕ್ರಮ ಆಸ್ತಿ ಸಂಪಾದಿಸಿರುವ ಧೀರಜ್ ಸಾಹುಗೆ ಧಿಕ್ಕಾರ, ಭ್ರಷ್ಟಾಚಾರವೇ ಕಾಂಗ್ರೆಸ್ ಗ್ಯಾರಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಕಾಂಗ್ರೆಸ್ ನಾಯಕರಿಂದ ಮಿತಿಮೀರಿದ ಭ್ರಷ್ಟಚಾರ ನಡೆಯುತ್ತಿದೆ ಎಂಬುದಕ್ಕೆ ಒಡಿಶಾದ ರಾಜ್ಯಸಭಾ ಸದಸ್ಯ ಧೀರಜ್ ಸಾಹುಗೆ ಸಂಬಂಧಿಸಿದ 300ಕ್ಕೂ ಅಧಿಕ ಕೋಟಿ ರೂ. ಕಪ್ಪು ಹಣ ಸಿಕ್ಕಿರುವುದೇ ಉತ್ತಮ ನಿದರ್ಶನ ಎಂದು ಆರೋಪಿಸಿದರು.

ಭ್ರಷ್ಟ ಹಣವನ್ನು ಕಾಂಗ್ರೆಸ್ಸಿಗರು ಚುನಾವಣೆಗೆ ವಿನಿಯೋಗಿಸುವುದು ಸಾಮಾನ್ಯವಾಗಿದೆ. ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ ವೇಳೆಯೂ ಕರ್ನಾಟಕದಿಂದ ಹಣ ಹರಿದಿದೆ ಎಂಬುದಕ್ಕೆ ಈ ಹಿಂದೆ ನಡೆದ ದಾಳಿ ವೇಳೆ 50, 100 ಕೋಟಿ ರೂ. ಸಿಕ್ಕಿದ್ದು, ರಾಜ್ಯದಲ್ಲೂ ಲೂಟಿ ಮುಂದುವರೆದಿದೆ. ಇದು ಆ ಪಕ್ಷದ ಸಂಸ್ಕೃತಿ ತೋರಿಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಕಲಬುರಗಿ ಸೇರಿ ಹಲವೆಡೆ ದಾಳಿ ನಡೆಯುತ್ತಿದೆ. ಈ ದುರಾಡಳಿತದ ವಿರುದ್ಧ ಗ್ರಾಮ, ಪಟ್ಟಣ, ನಗರ ಸೇರಿ ಎಲ್ಲಾ ಕಡೆ ಬೀದಿಗಿಳಿದು ಪ್ರತಿಭಟಿಸಿ, ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಮುಂದಾಗಲಿದೆ ಎಂದರು.

ಮುಖಂಡರಾದ ಸಂಪತ್‌ಕುಮಾರ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ಕೆ.ಮಲ್ಲಿಕಾರ್ಜುನ್, ಗೌರಣ್ಣ, ವೆಂಕಟೇಶ ಯಾದವ, ಡಿ.ಕೆ.ಜಯಣ್ಣ, ಎಲ್.ವಿ.ಪ್ರಶಾಂತ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ನಂದಿ ನಾಗರಾಜ್, ತಿಪ್ಪೇಸ್ವಾಮಿ, ಕಿಟ್ಟಿ, ಕಿರಣ, ಶಂಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net