ಭ್ರಷ್ಟಾಚಾರದ ವಿರುದ್ಧ ಕೆಆರ್‌ಎಸ್ ಪ್ರತಿಭಟನೆ

05 yelandur 01
ಯಳಂದೂರು ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂಭಾಗ ಗುರುವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ ನಡೆಸಿದರು.
Published on

ಯಳಂದೂರು: ಯಳಂದೂರಿನಲ್ಲಿರುವ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಲಂಚಕೋರತನ ನಡೆಯುತ್ತಿದೆ. ಅಧಿಕಾರಿ ವರ್ಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಾರ್ವಜನಿಕ ಸೇವೆಗಳಲ್ಲಿ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದ ವತಿಯಿಂದ ಗುರುವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ನಾಡಮೇಗಲಮ್ಮ ದೇಗುಲದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಕಾರರು, ಇಲಾಖೆ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಹಸೀಲ್ದಾರ್ ಕಚೇರಿಯ ಮುಂಭಾಗ ಜಮಾವಣೆಗೊಂಡರು.

ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಲ್.ಶ್ರೀನಿವಾಸ ಮಾತನಾಡಿ, ಇಲ್ಲಿನ ಸರ್ಕಾರಿ ಕಚೇರಿಯ ನೌಕರರು ತಮ್ಮ ಗುರುತಿನ ಚೀಟಿಗಳನ್ನು ಧರಿಸುವುದಿಲ್ಲ. ಇಲಾಖೆಯ ಮುಂಭಾಗ ಸೇವೆಗಳ ಪಟ್ಟಿ, ಸಕಾಲ ಪಟ್ಟಿಯನ್ನು ಪ್ರದರ್ಶಿಸಿಲ್ಲ, ಭ್ರಷ್ಟಾಚಾರ ನಿಗ್ರಹದಳ ಮತ್ತು ಲೋಕಾಯುಕ್ತರ ಸಂಪರ್ಕ ಮಾಹಿತಿ ಫಲಕ ಹಾಕಿಲ್ಲ, ವಿವಿಧ ಇಲಾಖೆಗಳ ಕೊಠಡಿಗಳ ನಾಮಫಲಕವಿಲ್ಲ, ಇಲಾಖೆಗಳಲ್ಲಿ ಅಧಿಕಾರಿಗಳ ಪದನಾಮಗಳ ಬಗ್ಗೆ ಮಾಹಿತಿ ಇಲ್ಲ, ಸಿಸಿ ಕ್ಯಾಮರ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಮಾಹಿತಿ ಹಕ್ಕು ಸಂಪರ್ಕಾಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ಮಾಹಿತಿ ಇಲ್ಲ, ಕಿಯೋಸ್ಕ್ ಸೌಲಭ್ಯ ಇದ್ದರೂ ಇದಕ್ಕೆ ವಿದ್ಯುತ್, ಇಂಟರ್ನೆಟ್ ಸಂಪರ್ಕ ಇಲ್ಲ. ಮಿನಿ ವಿಧಾನಸೌಧ ದುರಸ್ತಿ ಕಾಮಗಾರಿಯಲ್ಲಿ ಮೋಸ ನಡೆದಿದ್ದು, ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಾರೆ. ಇಲ್ಲಿನ ಸರ್ವೇ ಇಲಾಖೆಯಲ್ಲಿ ಲಂಚಗುಳಿತನ ಅಪಾರವಾಗಿದೆ. ಸಾರ್ವಜನಿಕ ಕೆಲಸಗಳು ವಿಳಂಬ ಮಾಡಲಾಗುತ್ತಿದೆ. ಪ್ರತಿಯೊಂದಕ್ಕೂ ಲಂಚವನ್ನು ಕೇಳಲಾಗುತ್ತದೆ. ಏಜೆಂಟರ ಮೂಲಕ ಇವರು ಹಣ ಮಾಡುವ ದಂಧೆ ನಡೆಸುತ್ತಿದ್ದಾರೆ. ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ವಿಫಲವಾಗುತ್ತಿದ್ದಾರೆ. ಕಂದಾಯ ಇಲಾಖೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ದಾಖಲೆಯನ್ನು ಕೇಳಿದರೆ ಇದಕ್ಕೆ ಇಲ್ಲಸಲ್ಲದ ನೆಪವೊಡ್ಡಿ ಗೊಂದಲ ಸೃಷ್ಟಿಸುತ್ತಾರೆ. ಸರಿಯಾದ ಹಿಂಬರಹವನ್ನೂ ನೀಡುವುದಿಲ್ಲ. ಹೀಗೆ ಅನೇಕ ಸಮಸ್ಯೆಗಳಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪಕ್ಷದ ಕಾರ್ಯದರ್ಶಿ ಶ್ರೀನಿವಾಸ್ ಬೂದಬಾಳು, ಪ್ರಭುಸ್ವಾಮಿ, ರಾಮು, ಶಂಕರ, ಮರಿಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net