

ಹುಕ್ಕೇರಿ: ಇಲ್ಲಿಯ ಪುರಸಭೆ ಭ್ರಷ್ಟಾಚಾರದ ಕೂಪವಾಗಿದೆ ಎಂದು ಹಲವು ದೂರುಗಳು ಬಂದಿವೆ. ಮತ್ತೆ ಹೀಗಾದಲ್ಲಿ ಸಂಬಂಧಿಸಿದ ಇಲಾಖೆಯ ಜಿಲ್ಲಾ ಮತ್ತು ರಾಜ್ಯ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತೇನೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸ್ಥಳೀಯ ಪುರಸಭೆ ಆವರಣದಲ್ಲಿ ೨೦೧೯-೨೦ನೇ ಸಾಲಿನ ಶಾಸಕರ ಅನುದಾನದಡಿ ಮಂಜೂರಾದ ೯೦ ಲಕ್ಷ ರೂ. ವೆಚ್ಚದ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ, ೪೦ ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ೧೫ನೇ ಹಣಕಾಸು ಯೋಜನೆಯಡಿ ಟ್ರ‍್ಯಾಕ್ಟರ್, ನೀರಿನ ಟ್ಯಾಂಕರ್ ಹಸ್ತಾಂತರ, ನಗರೋತ್ಥಾನ ಯೋಜನೆಯಡಿ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಸೋಮವಾರ ಲ್ಯಾಪ್‌ಟ್ಯಾಪ್ ವಿತರಿಸಿ ಮಾತನಾಡಿದರು.
ಕಾಯ್ದೆ ಉಲ್ಲಂಘಿಸಿ ಅನಧಿಕೃತ ಲೇಔಟ್‌ಗಳ ಉತಾರ ನೀಡುವಿಕೆ. ಪೌರ ಕಾರ್ಮಿಕರಿಗೆ ವಿತರಿಸಬೇಕಾದ ಸಮವಸ್ತ್ರ, ಶೂ. ಗ್ಲೌಜ್ ವಿತರಿಸದೆ ಇರುವುದು, ಸ್ಲಂ ಬೋರ್ಡ್ ಮನೆ ಮಂಜೂರಿಗೆ ಫಲಾನುಭವಿಗಳಿಂದ ಹಣ ಪಡೆಯುತ್ತಿರುವುದು ಸೇರಿ ಹಲವು ಆರೋಪ ಬಂದಿವೆ. ಈ ಎಲ್ಲ ಆರೋಪಗಳು ಗೊತ್ತಾದರೂ ಮೇಲಧಿಕಾರಿಗಳು ಸುಮ್ಮನಿರುವುದು ಆಶ್ಚರ್ಯ. ಇಂತಹ ಜನವಿರೋಧಿ ಕೃತ್ಯಗಳನ್ನು ನಾನು ಬೆಂಬಲಿಸುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು ಎಂದರು.
ಪುರಸಭೆ ಸದಸ್ಯ ಸದಾಶಿವ ಕರೆಪ್ಪಗೋಳ ಮಾತನಾಡಿ, ಕಾಯ್ದೆ ಉಲ್ಲಂಘಿಸಿ ಅನಧಿಕೃತ ಲೇಔಟ್‌ಗಳಿಗೆ ಉತಾರ ನೀಡುತ್ತಿರುವುದನ್ನು ಆಕ್ಷೇಪಿಸಿ ಏಪ್ರಿಲ್ ತಿಂಗಳಲ್ಲಿ ವಕೀಲರ ಮೂಲಕ ಮುಖ್ಯಾಧಿಕಾರಿಗಳಿಗೆ ಕಾನೂನಾತ್ಮಕ ನೋಟಿಸ್ ನೀಡಿದ್ದೇನೆ ಎಂದು ಶಾಸಕರ ಗಮನಕ್ಕೆ ತಂದರು.
ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಉಪಾಧ್ಯಕ್ಷೆ ಜ್ಯೋತಿ ಬಡಿಗೇರ, ಸ್ಥಾಯಿ ಸಮಿತಿ ಚೇರ್ಮನ್ ಮಹಾಂತೇಶ ತಳವಾರ, ಸದಸ್ಯರಾದ ಎ.ಕೆ.ಪಾಟೀಲ, ಮಹಾವೀರ ನಿಲಜಗಿ, ಆನಂದ ಗಂಧ, ಸದಾಶಿವ ಕರೆಪ್ಪಗೋಳ, ರೇಖಾ ಚಿಕ್ಕೋಡಿ, ಸದಾಶಿವ ಕರೆಪ್ಪಗೋಳ, ರುಕ್ಮಿಣಿ ಹಳಿಜೋಳ, ಸುರೇಖಾ ಗಳತಗಿಮಠ, ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಅಭಿಯಂತ ರಾಜಶೇಖರ ಪಟ್ಟಣಶೆಟ್ಟಿ ಇತರರಿದ್ದರು.