

ಹಾಸನ: ಭ್ರಷ್ಟಾಚಾರದ ಬಗ್ಗೆ ಸರ್ಕಾರಿ ಅಧಿಕಾರಿಗಳಲ್ಲಿ ಮಾತ್ರ ಅಲ್ಲ, ಸಾರ್ವಜನಿಕರಲ್ಲಿ, ಯುವ ಜನತೆಯಲ್ಲಿ ಅರಿವು ಮೂಡಿದಾಗ ಮಾತ್ರ ಭ್ರಷ್ಟಾಚಾರ ತಡೆ ಸಾಧ್ಯ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿ. ಮಲ್ಲಿಕ್ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ಐಕ್ಯೂಎಸಿ ವಿಭಾಗ, ರಾಜ್ಯಶಾಸ್ತ್ರ ವಿಭಾಗದ ಅರಿಸ್ಟಾಟಲ್ ವೇದಿಕೆ ಮತ್ತು ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ-2023 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ವಿರುದ್ಧ ಅರಿವು ಮೂಡಿಸುವ ಸಲುವಾಗಿ ರಾಜವಂಶಸ್ಥರ ಕಾಲದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜನ ಸಾಮಾನ್ಯರಿಗೆ ಇಂದು ಯಾವ ಸಮಸ್ಯೆಗೆ ಯಾರ ಬಳಿ ಹೋಗಿ ದೂರು ದಾಖಲು ಮಾಡಬೇಕು ಎಂಬುದೇ ತಿಳಿಯುವುದಿಲ್ಲ. ಗ್ರಾಮೀಣ ಭಾಗದಲ್ಲಿ ಹತ್ತು ಹಲವು ಸಮಸ್ಯೆಗಳು ಇದ್ದರೂ ಜನರು ಅಧಿಕಾರಿಗಳ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಯುವಕರಲ್ಲೂ ಭ್ರಷ್ಟಾಚಾರದ ಬಗ್ಗೆ ಅರಿವು ಇಲ್ಲದೆ ಇರುವುದು ಆಘಾತಕಾರಿ ವಿಷಯವಾಗಿದೆ. ಲೋಕಾಯುಕ್ತ ಇಲಾಖೆ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸಲು ವರ್ಷದಲ್ಲಿ ಎರಡ್ಮೂರು ತಿಂಗಳನ್ನು ಮೀಸಲು ಇರಿಸಲಾಗಿದೆ ಎಂದರು.
ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ ಮತ್ತು ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತ ಸಂಸ್ಥೆಗೆ ಬಲ ತಂದುಕೊಟ್ಟರು. ಭ್ರಷ್ಟಾಚಾರದ ಕುರಿತು ಜನ ಸಾಮಾನ್ಯರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವಂತೆ ಹಲವು ಯೋಜನೆಗಳನ್ನು ರೂಪಿಸಿಕೊಂಡು ಬಂದರು. ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾದರೆ ಸಾಲದು ಬದಲಾಗಿ, ಪ್ರತಿಯೊಬ್ಬ ಜನಸಾಮಾನ್ಯ ಕೂಡು ಅಭಿವೃದ್ಧಿಯಾಗಬೇಕು. ಹಾಗಾದಲ್ಲಿ ಮಾತ್ರ ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಕರೆದುಕೊಳ್ಳಬಹುದಾಗಿದೆ. ನಮ್ಮ ದೇಶದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಜತೆಗೆ ಭ್ರಷ್ಟಾಚಾರ ವ್ಯವಸ್ಥೆಯಲ್ಲೂ ದೇಶ ಮುಂಚೂಣಿಯಲ್ಲಿದೆ. ಹಾಗಾಗಿ ದೇಶದಲ್ಲಿ ಭ್ರಷ್ಟಾಚಾರ ಹೋಗಲಾಡಿಸುವ ಸಲುವಾಗಿ ಪ್ರಾಥಮಿಕ ಶಾಲಾ ಹಂತದಿಂದ ಕಾಲೇಜು ವಿದ್ಯಾರ್ಥಿಗಳವರೆಗೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆರಂಭದಲ್ಲಿ ಫಲಿತಾಂಶ ದೊರೆಯದಿದ್ದರೂ ಈ ಜಾಗೃತಿ ಕಾರ್ಯಕ್ರಮದ ಫಲ ಮುಂದಿನ ಕೆಲವು ವರ್ಷಗಳಲ್ಲಿ ದೊರೆಯಲಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಜಿ. ಕವಿತಾ, ಜಿಲ್ಲಾ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳಾದ ಕೆ. ಶಿಲ್ಪಾ, ಎಚ್.ಎನ್. ಬಾಲು, ಅಧ್ಯಾಪಕರಾದ ಜಿ. ಸುನೀತಾ, ಡಿ.ಜೆ. ರಮ್ಯಾ, ಡಿ.ಕೆ. ಮಂಜಯ್ಯ, ವಿ. ನಂದನ್, ಡಾ.ಸಿ.ಎಲ್. ಶಿವಕುಮಾರ್, ಉಪನ್ಯಾಸಕರಾದ ಶಿವಪ್ಪ, ಎಚ್.ಕೆ. ದಿಲೀಪ್ ಕುಮಾರ್ ಹಾಗೂ ಇತರರು ಹಾಜರಿದ್ದರು.