ಭ್ರಷ್ಟಾಚಾರ ನಿರ್ಮೂಲನೆಗೆ ಜಾಗೃತಿ ಅಗತ್ಯ

bkt-29-3
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶನಿವಾರ ಕರ್ನಾಟಕ ಲೋಕಾಯುಕ್ತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು- ತರಬೇತಿ ಕಾರ್ಯಕ್ರಮ,
Published on

ಬಾಗಲಕೋಟೆ: ಸಮಾಜಕ್ಕೆ ಕಂಟಕವಾದ ಭ್ರಷ್ಟಾಚಾರ ನಿರ್ಮೂಲನೆಗೆ ಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪುರ ಹೇಳಿದರು.


ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶನಿವಾರ ಕರ್ನಾಟಕ ಲೋಕಾಯುಕ್ತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು- ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಸರ್ಕಾರಿ ವ್ಯವಸ್ಥೆ ಮೇಲೆ ಜನಸಾಮಾನ್ಯರು ನಂಬಿಕೆ ಕಳೆದುಕೊಳ್ಳುವಂತಾಗಿದೆ. ಭ್ರಷ್ಠಾಚಾರ ರಹಿತ ಸಮಾಜ ಸೃಷ್ಟಿಸುವ ಹೊಣೆ ಎಲ್ಲರ ಮೇಲಿದ್ದು, ದುಡ್ಡಿಗೆ ಆಸೆ ಪಡದೇ ನ್ಯಾಯಯುತವಾಗಿ ಕೆಲಸ ನಿರ್ವಹಿಸುವ ಅಗತ್ಯವಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಮಾತನಾಡಿ, ಅತೀಯಾದ ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಭ್ರಷ್ಟಾಚಾರ ಅನಾದಿ ಕಾಲದಿಂದ ಬಂದಿದ್ದು, ಅಂದಿನ ರಾಜ ಮಹಾರಾಜರನ್ನು ಇಕ್ಕಟ್ಟಿಗೆ ಸಿಲುಕಿಸಿರುವುದನ್ನು ಕೇಳಿದ್ದೇವೆ. ಭ್ರಷ್ಟಾಚಾರದ ಕಳಂಕವನ್ನು ಹೊರದೇ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಬೇಕು. ಭ್ರಷ್ಟಾಚಾರ ಬೆಳೆಯದಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.


ಜಿ.ಪಂ ಸಿಇಒ ಟಿ.ಭೂಬಾಲನ್ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಕೆಲವರು ಮಾಡುವ ಭ್ರಷ್ಟಾಚಾರದಿಂದ ಈಡೀ ವಲಯವನ್ನೇ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಸರ್ಕಾರಿ ನೌಕರರು ಸಾರ್ವಜನಿಕರನ್ನು ಕಾಯಿಸದೇ, ಸತಾಯಿಸದೇ, ವಿಳಂಬ ಮಾಡದಂತೆ ಅವರ ಕೆಲಸ ಮಾಡಿಕೊಡಬೇಕು. ಅವಶ್ಯಕತೆ ಇರುವವರೇ ಸರ್ಕಾರಿ ಸೇವೆ ಪಡೆಯಲು ಬಂದಿರುತ್ತಾರೆ. ಅವರಿಂದ ಏನೂ ಅಪೇಕ್ಷೆ ಪಡದೇ ಕೆಲಸ ಮಾಡಿಕೊಡಬೇಕು. ಸರ್ಕಾರಿ ಕೆಲಸ ಯಾವುದೇ ಒಂದು ಪುಣ್ಯದಿಂದ ಲಭಿಸಿದ್ದು, ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.


ಲೋಕಾಯುಕ್ತ ಇಲಾಖೆಯ ಪೊಲೀಸ್ ಅಧಿಕ್ಷಕಿ ಅನಿತಾ ಹದ್ದಣ್ಣವರ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲೆಗಾಗಿಯೇ ರಾಜ್ಯದಲ್ಲಿ ಲೋಕಾಯುಕ್ತ ಇಲಾಖೆ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾಗಿದ್ದು, ಸರ್ಕಾರ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡಿದ ಅನುದಾನ ಸಮರ್ಪಕವಾಗಿ ವಿನಿಯೋಗವಾಗಬೇಕಿದೆ. ಇದರ ಮಧ್ಯ ಯಾವುದೇ ಭ್ರಷ್ಟಾಚಾರ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಭ್ರಷ್ಟಾಚಾರ ನಡೆಸಿದ್ದು ಸಾಬೀತುದಾದಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಶಿಕ್ಷೆಯ ಅವಽ ೩ ರಿಂದ ೭ ವರ್ಷದವರೆಗೆ ಶಿಕ್ಷೆಯನ್ನು ವಿಸ್ತರಿಸಲಾಗಿದೆ ಎಂದರು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲರಾದ ಎಸ್.ಸಿ.ಹಿರೇಮಠ ಹಾಗೂ ಕೆ.ಬಿ.ಅಬ್ಬಿಗೇರಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಲೋಕಾಯುಕ್ತ ಇಲಾಖೆಯ ಡಿವೈಎಸ್‌ಪಿ ಪುಷ್ಪಲತಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net