

ಕೊಡಗು : ದೇಶದಲ್ಲಿ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಿದಲ್ಲಿ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಸಾರ್ವಜನಿಕ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ನದೀಮ್ ಪಾಷಾ ಅಭಿಪ್ರಾಯಪಟ್ಟರು.
ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿಯೇ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ನಾಗರಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಮಧ್ಯವರ್ತಿಗಳ ಹಾಗೆ ಕರ್ತವ್ಯ ನಿರ್ವಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಮ್ಮ ಸಂಸ್ಥೆಯ ವತಿಯಿಂದ ಇಂತಹ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಹೋರಾಟ ರೂಪಿಸಲಾಗುವುದು ಎಂದರು.
ಸಮಾಜ ಸೇವೆಯನ್ನೇ ತನ್ನ ಮುಖ್ಯ ಉದ್ದೇಶವನ್ನಾಗಿಸಿರುವ ಸಂಸ್ಥೆಯು ಸರ್ಕಾರದಿಂದ ಶಾಲಾ ಮಕ್ಕಳಿಗೆ ಮತ್ತು ಕಡುಬಡವರಿಗೆ ಸಿಗಬೇಕಾದಂತಹ ಎಲ್ಲ ಮೂಲ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಕೊಡಗು ಜಿಲ್ಲಾಧ್ಯಕ್ಷ ಎನ್.ಮೋಹನ್ ಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲೆಯ 5 ತಾಲೂಕುಗಳಲ್ಲೂ ಸಾರ್ವಜನಿಕ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ನಿಗ್ರಹದಳದ ಪದಾಧಿಕಾರಿಗಳನ್ನು ನೇಮಕಾತಿ ಮಾಡುವ ಉದ್ದೇಶ ಹೊಂದಿದ್ದು, ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ಸಾಮಾಜಿಕವಾಗಿ ಭ್ರಷ್ಟತೆಯನ್ನು ತೊಲಗಿಸುವ ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಹಾಸನ ಜಿಲ್ಲಾಧ್ಯಕ್ಷ ಈ.ರಾಜೇಶ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಸಾಮಾಜಿಕ ಭದ್ರತೆ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಮಾಡುತ್ತಿರುವ ಕರ್ತವ್ಯ ಲೋಪವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ಭ್ರಷ್ಟಾಚಾರದ ವಿರುದ್ಧ ಸಂಸ್ಥೆಯ ವತಿಯಿಂದ ಹೋರಾಟ ಮಾಡಲಾಗುವುದು. ಸಮಾಜ ಸೇವೆಯನ್ನು ಮುಖ್ಯ ಪೀಠಿಕೆಯನ್ನಾಗಿ ಅಳವಡಿಸಿಕೊಂಡು ಉತ್ತಮವಾಗಿ ಕರ್ತವ್ಯ ನಿಭಾಯಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ನಿಗ್ರಹದ ಹಾಸನ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಣಿ ಮಲ್ಲೇಶ್ ಸಂದರ್ಭೋಚಿತವಾಗಿ ಮಾತನಾಡಿದರು. ಸಾರ್ವಜನಿಕ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಯೂಬ್ ಖಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು.