ಭ್ರಷ್ಟಾಚಾರ ತೊಲಗಿಸಲು ದೂರು ನೀಡಿ

web1
ಬೈಲಹೊಂಗಲದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಜನ ಸಂಪರ್ಕ ಸಭೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಮಾತನಾಡಿದರು. ಉಪಾಧೀಕ್ಷಕ ಬಿ.ಎಸ್.ಪಾಟೀಲ, ಭರತ ಎಸ್.ಆರ್., ಪೊಲೀಸ್ ನಿರೀಕ್ಷಕ ಯು.ಎಸ್.ಆವಟಿ ಇತರರು ಇದ್ದರು.
Published on

ಬೈಲಹೊಂಗಲ: ಸರ್ಕಾರಿ ನೌಕರರು ಅಗತ್ಯ ಅವಧಿಯಲ್ಲಿ ಸಾರ್ವಜನಿಕರ ಸೇವೆಗಳನ್ನು ಪೂರೈಸಿ, ಸರ್ಕಾರಿ ಕರ್ತವ್ಯ ಮೆರೆಯಬೇಕು ಎಂದು ಬೆಳಗಾವಿಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಹೇಳಿದರು.

ಪಟ್ಟಣದ ಹೊಸೂರ ರಸ್ತೆಯಲ್ಲಿನ ತಾಪಂ ಕಾರ್ಯಾಲಯದ ಸಭಾಭವನದಲ್ಲಿ ಕರ್ನಾಟಕ ಲೋಕಾಯುಕ್ತ ಬೆಳಗಾವಿ ಜಿಲ್ಲಾ ಕಚೇರಿ ಇವರ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಪ್ರಾಮಾಣಿಕತೆಯಿಂದ ನಾಗರಿಕರ ಸೇವೆ ಮಾಡಿ ಜವಾಬ್ದಾರಿ ಮೆರೆಯಬೇಕು ಎಂದರು.

ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜೆ. ರಘು ಮಾತನಾಡಿ, ಲೋಕಾಯುಕ್ತದ ವ್ಯವಸ್ಥೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕಾನೂನು ಅರಿವು, ಜನಸಂಪರ್ಕ ಸಭೆಗಳನ್ನು ಪ್ರತಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿ, ಯಾವುದೇ ಅಪೇಕ್ಷೆ ಬಯಸುತ್ತಿದ್ದರೆ ಲೋಕಾಯುಕ್ತ ಕಚೇರಿಗೆ ದೂರು ನೀಡಬೇಕೆಂದು ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿನ ಉಪ ನೊಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ನಾಗರಿಕರೊಬ್ಬರು ಆರೋಪಿಸಿದ ಹಿನ್ನೆಲೆಯಲ್ಲಿ, ಪರೀಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದರು.

ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಪಾಟೀಲ, ಭರತ ಎಸ್.ಆರ್., ಪೊಲೀಸ್ ನಿರೀಕ್ಷಕ ಯು.ಎಸ್.ಆವಟಿ, ಲೋಕಾಯುಕ್ತ ಉಪ ನಿರೀಕ್ಷಕ ಎ.ಆರ್. ಕಲಾದಗಿ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಸಂಪಗಾಂವಿ, ಆರಕ್ಷಕ ಠಾಣೆಯ ಉಪನಿರೀಕ್ಷಕ ಪಿ. ವಿ.ಸಾಲಿಮಠ, ಗ್ರೇಡ್-2 ಪ್ರಭಾರಿ ತಹಸೀಲ್ದಾರ್ ಜಯದೇವ ಅಷ್ಟಗಿಮಠ, ತಾಲೂಕು ಅಕ್ಷರ ದಾಸೋಹ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರಕಾಶ ಮೆಳವಂಕಿ, ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗ ಅಧಿಕಾರಿ ವಿಜಯ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net