ಭ್ರಷ್ಟರಿಗೆ ಎಸಿಬಿ ಶಾಕ್, ಜಿಲ್ಲೆಯ ವಿವಿಧೆಡೆ ತಲಾಶ್, ಅಪಾರ ಹಣ, ಚಿನ್ನಾಭರಣ, ಆಸ್ತಿ ಪತ್ತೆ

24 Nela Ph 02 ACB Officer Raide
Published on

ನೆಲಮಂಗಲ: ನಗರದ ಪರಮಣ್ಣ ಬಡಾವಣೆ ನಿವಾಸಿ ಸಕಾಲ ಆಡಳಿತಾಧಿಕಾರಿ ಎಲ್.ಸಿ.ನಾಗರಾಜುಗೆ ಬುಧವಾರ ಭ್ರಷ್ಟ್ಟಾಚಾರ ನಿಗ್ರಹದಳ ಶಾಕ್ ನೀಡಿದೆ.

ಬುಧವಾರ ಬೆಳ್ಳಂಬೆಳ್ಳಗ್ಗೆ ನಗರದ ಪರಮಣ್ಣ ಬಡಾವಣೆ ನಿವಾಸಿಯಾದ ಸಕಾಲ ಆಡಳಿತಾಧಿಕಾರಿ ಎಲ್.ಸಿ.ನಾಗರಾಜು ಅವರ ಮನೆ ಮೇಲೆ ಎಸಿಬಿ ಡಿವೈಎಸ್‌ಪಿ ಪ್ರಮೋದ್‌ಕುಮಾರ್ ನೇತೃತ್ವದಲ್ಲಿ ಇಬ್ಬರು ಎಸಿಬಿ ಇನ್‌ಸ್ಪೆಕ್ಟರ್ ಹಾಗೂ 20ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿತು. ಜತೆಗೆ ಆಪ್ತ ಸ್ನೇಹಿತ ನಂದೀಶ್, ಸಂಬಂಧಿ ನಗರದ ಪೇಟೆಬೀದಿ ನಿವಾಸಿ ಗೋವಿಂದರಾಜು ಹಾಗೂ ಲಕ್ಷ್ಮೀನಾರಾಯಣ್ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ ತಂಡ ದಿನಪೂರ್ತಿ ದಾಖಲೆ ಶೋಧಿಸಿದ್ದಾರೆ.

ಬಹುಕೋಟಿ ಐಎಂಎ ವಂಚನೆಯಲ್ಲಿ ಭಾಗಿ: ಎಲ್.ಸಿ.ನಾಗರಾಜು ಬೆಂಗಳೂರು ನಗರ ಜಿಲ್ಲಾ ಉಪವಿಭಾಗಾಧಿಕಾರಿಯಾಗಿದ್ದ ವೇಳೆ 2019ರ ಜುಲೈನಲ್ಲಿ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಪ್ರಕರಣ ಪ್ರಮುಖ ಆರೋಪಿ ಮನ್ಸೂರುಖಾನ್ ಅವರಿಂದ ಸುಮಾರು 4.5 ಕೋಟಿ ರೂಪಾಯಿ ಲಂಚ ಪಡೆದ ಆರೋಪದಲ್ಲಿ ಎಸ್‌ಐಟಿ ಬಂಧಿಸಿತು.

ಸೀರೆಯ ಮಧ್ಯದಲ್ಲಿ ಹಣದ ಕಂತೆ: 43ಲಕ್ಷ ಲಕ್ಷಕ್ಕೂ ಹೆಚ್ಚು ನಗದು, ಕೋಟ್ಯಂತರ ಮೌಲ್ಯದ ಆಸ್ತಿ, ನಿವೇಶನ ಸೇರಿ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ, ದಾಖಲೆ ಪತ್ರ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಬೀರುವಿನಲ್ಲಿದ್ದ ಸೀರೆಯ ಮಧ್ಯದಲ್ಲಿ ಲಕ್ಷಾಂತರ ಹಣ ಇಡಲಾಗಿತ್ತು ಎನ್ನಲಾಗಿದೆ. ಹಣ ಎಣಿಕೆ ಮಾಡಲು ಎಸಿಬಿ ಅಧಿಕಾರಿಗಳು, ಸಮೀಪದ ಖಾಸಗಿ ಬ್ಯಾಂಕ್‌ನಿಂದ ಹಣ ಏಣಿಕೆ ಯಂತ್ರ ತಂದಿದ್ದರು ಎಂದು ಎಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಅಪಾರ ಹಣ ಪತ್ತೆ: ಬೆಂಗಳೂರಲ್ಲಿ 1 ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದಲ್ಲಿ 1 ವಾಸದ ಮನೆ, ನೆಲಮಂಗಲ ತಾಲೂಕಿನ ವಿವಿಧೆಡೆ ಸುಮಾರು 11.26 ಎಕರೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ವಿವಿಧ ಕಂಪನಿ ಕಾರುಗಳು, 1.76 ಗ್ರಾಂ ಚಿನ್ನಾಭರಣ, 7 ಕೆ.ಜಿ 284 ಗ್ರಾಂ ಬೆಳ್ಳಿ ಸಾಮಾನು, 43 ಲಕ್ಷ ನಗದು ಹಾಗೂ ಸುಮಾರು 14 ಲಕ್ಷ ರೂ. ಮೊತ್ತದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ನಾನು ಪ್ರಾಮಾಣಿಕ ಅಧಿಕಾರಿ: ಯಾವುದೇ ತಪ್ಪು ಮಾಡಿದರೂ ನ್ಯಾಯಾಲಯ ಶಿಕ್ಷೆ ನೀಡುತ್ತದೆ. ನನ್ನ ತಾತ ಜಮೀನುದಾರರಾಗಿದ್ದು, ಅವರ ಹಣ 43 ಲಕ್ಷ ರೂ. ನನ್ನ ಬಳಿ ಇತ್ತು. ನಾನು ಕೃಷಿ ಕಾಯಕ ಮಾಡುತ್ತಿದ್ದು, ನನ್ನ ಪತ್ನಿ ಉದ್ಯಮಿಯಾಗಿದ್ದು, ಆದಾಯ ಗಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅದಾಯ ತೆರಿಗೆಯನ್ನು ಪಾವತಿಸಲಾಗಿದೆ. ನಾನು ಸರ್ಕಾರಿ ಕೆಲಸದಲ್ಲಿ ಅಕ್ರಮವಾಗಿ ಹಣಗಳಿಸಿಲ್ಲ. ನಾನು ರಾಜಕೀಯವಾಗಿ ಮುಂದಿನ ದಿನಗಳಲ್ಲಿ ಬೆಳೆಯುತ್ತೇನೆ ಎಂಬ ದುರುದ್ದೇಶದಿಂದ ದಾಳಿ ನಡೆಸಿದ್ದಾರೆ. ನನ್ನ ಅತ್ತೆಗೆ ಹೃದಯಘಾತವಾಗಿದ್ದು, ಅವರ ಚಿಕಿತ್ಸೆಗಾಗಿ ಹಣ ಇಟ್ಟಿದ್ದು, ಅಧಿಕಾರಿಗಳು ಕೇಳಿದ್ದ ಎಲ್ಲ ಪ್ರಶ್ನೆಗೂ ಉತ್ತರ ನೀಡಿದ್ದೇನೆ. ನಾನು ಪ್ರಾಮಾಣಿಕವಾಗಿ ಸರ್ಕಾರಿ ಸೇವೆಯನ್ನು ಮಾಡುತ್ತಿದ್ದೇನೆ. ಯಾವುದೇ ಅಕ್ರಮದಲ್ಲೂ ಪಾಲ್ಗೊಂಡಿಲ್ಲ ಎಂದು ಸಕಾಲ ಆಡಳಿತಾಧಿಕಾರಿ ಎಲ್.ಸಿ.ನಾಗರಾಜು ತಿಳಿಸಿದರು.

ರಾಜಸ್ವ ನಿರೀಕ್ಷನ ಮೇಲೆಯಲ್ಲಿ ಅಪಾರ ಹಣ, ಚಿನ್ನಾಭರಣ

ದೊಡ್ಡಬಳ್ಳಾಪುರ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ದೊಡ್ಡಬಳ್ಳಾಫುರ ಕಸಬಾ -2 ರಾಜಸ್ವ ನಿರೀಕ್ಷಕ ಲಕ್ಷೀನರಸಿಂಹಯ್ಯ ಅವರ ಕಚೇರಿ, ಮನೆ ಮತ್ತು ಪತ್ನಿಯ ತವರುಮನೆ, ಸ್ನೇಹಿತರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಬುಧವಾರ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣ ಹಣ, ಚಿನ್ನಾಭರಣ, ಆಸ್ತಿಪತ್ರ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳು ಪತ್ತೆಯಾಗಿವೆ.

ಭ್ರಷ್ಟಾಚಾರ ನಿಗ್ರಹ ದಳದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕಲಾಕೃಷ್ಣಸ್ವಾಮಿ ನೇತೃತ್ವದ ತಂಡ ಪಟ್ಟಣದ ತೇರಿನ ಬೀದಿಯಲ್ಲಿರುವ ಲಕ್ಷ್ಮೀ ನರಸಿಂಹಯ್ಯ ಅವರ ವಾಸದ ಮನೆ, ಕಚೇರಿ, ತಾಯಿ ಮನೆ ಮತ್ತು ಸ್ನೇಹಿತನ ಮನೆ, ಸೊಣ್ಣಪ್ಪನಹಳ್ಳಿಯಲ್ಲಿ ಮಾವನ ಮನೆ ಮತ್ತು ಕೆಂಗೇರಿ ಬಳಿ ಮಾಡಿರುವ ಆಸ್ತಿ ಸೇರಿ 7 ಕಡೆ ಏಕಕಾಲಕ್ಕೆ ದಾಳಿ ನಡೆಸಿದೆ.

ಆರ್‌ಐ ಲಕ್ಷ್ಮೀನರಸಿಂಹಯ್ಯ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪರಭಾರೆ ಮಾಡಿಕೊಟ್ಟಿದ್ದ ಆರೋಪ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ತನಿಖಾ ಹಂತದಲ್ಲಿದೆ.

ದಾಳಿಯಲ್ಲಿ ಏನೇನು ಪತ್ತೆ: ವಿವಿಧ ಕಡೆಗಳಲ್ಲಿ 5 ವಾಸದ ಮನೆಗಳು, 6 ನಿವೇಶನ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 25 ಗುಂಟೆ ಭೂಮಿ, 765 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ ಸಾಮಾನು, 1 ಕಾರು, 2 ದ್ವಿ ಚಕ್ರ ವಾಹನಗಳು, 1,13,000 ರೂಪಾಯಿ ನಗದು ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕನ ಮನೆ ಪರಿಶೀಲನೆ

ದಾಬಸ್‌ಪೇಟೆ: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಆರ್.ಎನ್.ವಾಸುದೇವ್ ಅವರ ದಾಬಸ್‌ಪೇಟೆಯ ನಿವಾಸದ ಮೇಲೆ ಭ್ರಷ್ಟಚಾರ ನಿಗ್ರಹದಳದ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮೀ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮೂಲತಃ ಕೆಂಗೇರಿಯ ವಾಸುದೇವ್ ದಾಬಸ್‌ಪೇಟೆಯ ಗುರುಸಿದ್ದಪ್ಪ ಬಡಾವಣೆಯಲ್ಲಿ ನೂತನವಾಗಿ ಮನೆ ಕಟ್ಟಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ದಾಳಿ ನಡೆದಿದ್ದು, ಸಂಜೆ ವರೆಗೂ ದಾಖಲೆ ಪರಿಶೀಲಿಸಲಾಗಿದೆ.

ಬೆಂಗಳೂರಲ್ಲಿ 5 ವಾಸದ ಮನೆಗಳು, ನೆಲಮಂಗಲ ತಾಲೂಕಿನ ಸೋಂಪುರದಲ್ಲಿ 4 ಮನೆಗಳು, ಬೆಂಗಳೂರಲ್ಲಿ 8 ನಿವೇಶನ, ನೆಲಮಂಗಲ ಹಾಗೂ ಮಾಗಡಿ ತಾಲೂಕಿನಲ್ಲಿ ಒಟ್ಟು 10.20 ಎಕರೆ ಕೃಷಿ ಜಮೀನು, 850 ಗ್ರಾಂ ಚಿನ್ನಾಭರಣ, 9 ಕೆಜಿ 500 ಗ್ರಾಂ ಬೆಳ್ಳಿ ಸಾಮಗ್ರಿ, 5 ಲಕ್ಷ ರೂ. ನಗದು ಹಾಗೂ ಸುಮಾರು 98 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net