

ತಿ.ನರಸೀಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇರ ಆರೋಪ ಮಾಡಿದರು.
ತಾಲೂಕಿನ ಬನ್ನೂರು ಪಟ್ಟಣದ ರತ್ನಮಹಲ್ ಚಿತ್ರಮಂದಿರ ಮುಂಭಾಗದ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಪ್ರಜಾಧ್ವನಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ಕಳಂಕಿತ ಸರ್ಕಾರವೆಂಬ ಹಣೆಪಟ್ಟಿ ಹೊತ್ತಿದೆ. ಕಳೆದ ಚುನಾವಣೆಯಲ್ಲಿ ಜನರು ನಮಗೆ ಆಶೀರ್ವಾದ ಮಾಡದೆ, 80 ಸೀಟುಗಳನ್ನು ಪಡೆದ ನಾವು ಬಿಜೆಪಿಗೆ ಅಧಿಕಾರ ಕೊಟ್ಟೆವು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರಿಗೆ ಇಷ್ಟ ಇತ್ತೋ ಇಲ್ಲವೋ ಕುಮಾರಸ್ವಾಮಿ ಅವರಿಗೆ ಅಧಿಕಾರ ಮಾಡುವಂತೆ ಹೇಳಿ ಬೆಂಬಲ ನೀಡಿದರು. ಆದರೆ ಕುಮಾರಸ್ವಾಮಿ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ಹಾಗಾಗಿ, ಪ್ರಸ್ತುತ ಭ್ರಷ್ಟ ಸರ್ಕಾರ ಅಧಿಕಾರಕ್ಕೆ ಬರಲು ಕುಮಾರಸ್ವಾಮಿಯವರೇ ನೇರ ಕಾರಣ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಸಿದ್ದರಾಮಯ್ಯ, ಎಚ್.ಸಿ. ಮಹದೇವಪ್ಪ, ಆರ್. ಧ್ರುವನಾರಾಯಣ ಸೇರಿದಂತೆ ಕಾಂಗ್ರೆಸ್‌ನ ಮುಖಂಡರೊಂದಿಗೆ ಚರ್ಚಿಸಿ ನನಗೆ ಚುನಾವಣೆಯ ಜವಾಬ್ದಾರಿ ನೀಡಿದ್ದಾರೆ. ನನ್ನ ಅಧ್ಯಕ್ಷತೆಯಲ್ಲಿಯೇ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ದರಿದ್ರ ಸರ್ಕಾರ ಹೋಗಬೇಕು. ಜನರ ಬದುಕು ಹಸನಾಗಬೇಕು. ಈ ನಿಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ರಚನೆಯಾಗಬೇಕು. ರಾಜ್ಯದ ಜನತೆ ನಮಗೆ ಆಶೀರ್ವದಿಸಿ ನಮ್ಮ ಕೈ ಬಲಪಡಿಸಬೇಕು ಎಂದರು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ತಾಲೂಕು ವಸತಿ ಜಾಗೃತಿ ಯೋಜನೆಯ ಮಾಜಿ ಅಧ್ಯಕ್ಷ ಸುನೀಲ್ ಬೋಸ್, ಎಐಸಿಸಿ ಕಾರ್ಯದರ್ಶಿ ಅನಿಲ್‌ಕುಮಾರ್, ಶಾಸಕ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಎಂ. ರೇವಣ್ಣ, ವಿ.ಎಸ್. ಉಗ್ರಪ್ಪ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಜಿಪಂ ಮಾಜಿ ಅಧ್ಯಕ್ಷರಾದ ಬಿ.ಎಂ. ರಾಮು, ಕೆ .ಮರಿಗೌಡ, ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ಕ್ಷೇತ್ರಾಧ್ಯಕ್ಷ ಎಂ.ಡಿ. ಬಸವರಾಜು, ಪುಟ್ಟರಾಜು, ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎ.ಎನ್. ಸ್ವಾಮಿ, ಮೈಮುಲ್ ನಿರ್ದೇಶಕ ಚೆಲುವರಾಜು, ತಿ.ನರಸೀಪುರ ಪುರಸಭಾ ಸದಸ್ಯ ಸಿದ್ದೇಗೌಡ, ರವೀಂದ್ರಕುಮಾರ್, ಲಕ್ಷ್ಮೀನಾರಾಯಣ, ಸಿದ್ದರಾಜು, ಗುತ್ತಿಗೆದಾರ ಸಿದ್ದೇಗೌಡ, ಶಶಿ ನಾಗಭೂಷಣ್ ಮತ್ತಿತರರಿದ್ದರು.