

ಬಾಗೇಪಲ್ಲಿ: ಕೃಷಿ ಮತ್ತು ಜನಸಾಮಾನ್ಯರ ಬಗ್ಗೆ ಬದ್ಧತೆ ಇಲ್ಲದ ಭ್ರಷ್ಟ ರಾಜಕಾರಣಿಗಳ ಆಯ್ಕೆ ಮತ್ತು ದುರಾಡಳಿತದಿಂದ ಈ ಭಾಗಕ್ಕೆ ನದಿಗಳ ನೀರು ಹರಿಯಲು ಸಾಧ್ಯವಾಗಿಲ್ಲ ಎಂದು ರೈತಸಂಘ, ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ನಾರೇಪಲ್ಲಿ ಟೋಲ್‌ಗೇಟ್ ಬಳಿ ರೈತಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀರಾವರಿ ತಜ್ಞ ಡಾ.ಪರಮಶಿವಯ್ಯ ವರದಿಯಿಂತೆ ಚಿಕ್ಕಬಳ್ಳಾಪುರ ಜಿಲ್ಲೆ ಅತ್ಯಂತ ಹಿಂದುಳಿದಿದ್ದು ಬರಪೀಡಿತ ಪ್ರದೇಶವಾಗಿದೆ. ಜಿಲ್ಲೆಯ ಗಡಿಭಾಗದಲ್ಲೇ ಹರಿದು ಹೋಗುತ್ತಿರುವ ಕೃಷ್ಣ ನದಿ ನೀರನ್ನು ಜಿಲ್ಲೆಗೆ ತರುವಲ್ಲಿ ಸರ್ಕಾರಗಳು ವಿಲವಾಗಿವೆ ಎಂದು ಕಿಡಿಕಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಕ್ತರಹಳ್ಳಿ ಬೈರೇಗೌಡ, ಅಬ್ಬಣಿ ಶಿವಣ್ಣ, ಮಹಿಳಾ ಸಂಚಾಲಕಿ ಸಿ.ಉಮಾ, ಸಂಚಾಲಕ ಎಸ್.ಲಕ್ಷ್ಮಣರೆಡ್ಡಿ, ಹಸಿರುಸೇನೆ ಜಿಲ್ಲಾ ಸಂಚಾಲಕ ಚಂದು, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಎಂ.ಎಸ್.ನರಸಿಂಹರೆಡ್ಡಿ, ಚೇಳೂರು ತಾಲೂಕು ಅಧ್ಯಕ್ಷ ಬಿ.ಎಂ.ಬೈಯಪ್ಪ, ಉಪಾಧ್ಯಕ್ಷ ಪಿ.ಈಶ್ವರರೆಡ್ಡಿ, ಪದಾಧಿಕಾರಿಗಳಾದ ವಾಲ್ಮೀಕಿ ನಗರದ ಶ್ರೀನಿವಾಸ್, ವಿಜಯಕುಮಾರ್, ಅರ್ಜುನ್, ಟಿ.ಎಸ್.ಪ್ರಮೀಳಾ, ಎಸ್.ಅನಿತಾ, ನಾಗರತ್ನಮ್ಮ, ಶ್ಯಾಮಲಾ ಇತರರಿದ್ದರು.
ಹೋರಾಟಕ್ಕೆ ಬಗ್ಗಿದ ಸರ್ಕಾರ: ರೈತರು ಆತ್ಮಹತ್ಯೆ ಮಾಡಿಕೊಳ್ಳದೆ ಧೈರ್ಯವಾಗಿ ಸಮಸ್ಯೆ ಎದುರಿಸಬೇಕು, ಸಂಘ ನಿಮ್ಮ ಬೆನ್ನಿಗೆ ನಿಲ್ಲುತ್ತದೆ. ಶಾಶ್ವತ ನೀರಾವರಿ ಹೋರಾಟ ಸಮಿತಿಯ ಹಲವು ವರ್ಷಗಳ ಹೋರಾಟದ ಕಿಚ್ಚಿನಿಂದ ಜಿಲ್ಲೆಗೆ ಎತ್ತಿನಹೊಳೆ ಯೋಜನೆ, ಎಚ್.ಎನ್ ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ ಹೊರತು ಸ್ವಇಚ್ಚೆಯಿಂದ ಅಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಕುಟುಕಿದರು.