ಭ್ರಷ್ಟ ರಾಜಕಾರಣದಿಂದ ಸಮಸ್ಯೆಗಳು ಹೆಚ್ಚಳ

23BTP02 (1)
ಬೆಟ್ಟದಪುರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆಯೋಜಿಸಿದ ತಂಬಾಕು ಬೆಳೆಗಾರ ಹಾಗೂ ರೈತರ ಜಾಗೃತಿ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪ್ರತಿಯನ್ನು ಹಸ್ತಾಂತರ ಮಾಡಲಾಯಿತು. ರವಿಕೃಷ್ಣಾರೆಡ್ಡಿ, ಗುರುಮೂರ್ತಿ, ಆದರ್ಶ, ಅಜೀತ್ ಇದ್ದರು.
Published on

ಬೆಟ್ಟದಪುರ: ಭ್ರಷ್ಟ ರಾಜಕಾರಣದಿಂದಾಗಿ ಜನರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಅಧ್ಯಕ್ಷರವಿಕೃಷ್ಣಾರೆಡ್ಡಿ ತಿಳಿಸಿದರು.

ಕೆಆರ್‌ಎಸ್ ವತಿಯಿಂದ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಂಬಾಕು ಬೆಳೆಗಾರರು ಹಾಗೂ ರೈತರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಖಚಿತ ಎಂದರು.

ತಂಬಾಕು ಮಾರುಕಟ್ಟೆಯಲ್ಲಿ ರೈತರಿಂದ ಲಂಚ ಪಡೆಯುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಈ ಲಂಚದ ಹಣವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸೇರುತ್ತದೆ. ಚುನಾವಣೆ ಸಂದರ್ಭದಲ್ಲಿ ಅದೇ ಹಣದಲ್ಲಿ ಒಂದು ಭಾಗವನ್ನು ಜನರಿಗೆ ನೀಡಿ ಮತ ಪಡೆಯುತ್ತಾರೆ. ಇಂತಹ ಭ್ರಷ್ಟ ವ್ಯವಸ್ಥೆ ದೂರವಾಗಬೇಕಾದರೆ ಮೊದಲು ಜನರು ಬದಲಾಗಬೇಕು ಎಂದು ಹೇಳಿದರು.

ಸರ್ಕಾರ ಮತ್ತು ಖಾಸಗಿ ವಿಮೆ ಕಂಪನಿಗಳೊಂದಿಗೆ ಚರ್ಚಿಸಿ ತಂಬಾಕು ಬೆಳೆಗೆ ವಾಣಿಜ್ಯ ವಿಮೆ ನೀಡಬಹುದು. ಒಂದು ವೇಳೆ ತಂಬಾಕಿಗೆ ವಿಮೆ ಕೊಟ್ಟರೆ ಐಟಿಸಿ ಕಂಪನಿಗೆ ನಷ್ಟ ಆಗಲಿದೆ. ಅದಕ್ಕೆ ಜನಪ್ರತಿನಿಧಿಗಳು ಈ ವಿಚಾರವಾಗಿ ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.

ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಅಜಿತ್ ಮಾತನಾಡಿ, ಪ್ರಸ್ತುತ ರೈತರ ಮೇಲಿನ ಶೋಷಣೆ ಹೆಚ್ಚಾಗುತ್ತಿದೆ ಎಂದು ಬೇಸರಿಸಿದರು.

ಇದೇ ವೇಳೆ ಪಕ್ಷದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪ್ರತಿ ನೀಡಲಾಯಿತು. ಪಕ್ಷದ ರೈತ ಘಟಕದ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಆದರ್ಶ, ಪದಾಧಿಕಾರಿಗಳಾದ ಸಿ.ಎಂ ರಾಜು, ಶೇಖರ್, ಲೋಕೇಶ್ ಆರಾಧ್ಯ, ದಿನೇಶ್, ಮಲ್ಲೇಶ್, ವೀರಭದ್ರ ಸೇರಿದಂತೆ ಮೈಸೂರು ಹಾಗೂ ಹಾಸನ ಜಿಲ್ಲೆಯ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net