

ಸೋಮವಾರಪೇಟೆ: ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳು ಹಾಗು ನೌಕರರನ್ನು ಕಾನೂನಿಂದ ಪಾರಾಗಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಎಚ್ಚರಿಕೆ ನೀಡಿದರು.
ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ರೈತರು, ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಗದಿತ ಸಮಯದಲ್ಲಿ ಯಾವುದೇ ಕೆಲಸವಾಗುತ್ತಿಲ್ಲ. ಸರ್ಕಾರಿ ಅಧಿಕಾರಿಗಳೊಂದಿಗೆ ಗುತ್ತಿಗೆ ನೌಕರರು ಕೂಡ ಫಾರ್ಚುನರ್ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂಬ ವಿಷಯ ಹಾಗು ಮಾಹಿತಿಯನ್ನು ಇಲ್ಲಿನ ಶಾಸಕರು ನೀಡಿದ್ದಾರೆ. ಭ್ರಷ್ಟರು ಕಾನೂನು ಶಿಕ್ಷೆ ಅನುಭವಿಸಲೇಬೇಕು. ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಏರು ಧ್ವನಿಯಲ್ಲಿ ಹೇಳಿದರು.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಕಾರ್ಯಕರ್ತರ ಶ್ರಮ ಕಾರಣ. ಮತದಾರರು ಈ ಬಾರಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಹಾಗಾಗಿ ಮತದಾರರ ನಂಬಿಕೆ ಉಳಿಸುವ ಕೆಲಸವನ್ನು ಕಾರ್ಯಕರ್ತರು ಉಳಿಸಬೇಕು. ಜನರಿಗೆ ತೊಂದರೆಯಾದಾಗ ಅವರ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಚುನಾವಣೆಗೂ ಮುನ್ನ ಕಾಂಗ್ರೆಸ್ 60 ಸಾವಿರ ಕೋಟಿ ರೂ.ಗಳ ಯೋಜನೆಯ 5 ಆಶ್ವಾಸನೆ ನೀಡಿತ್ತು. ಅದರಲ್ಲಿ ಈಗಾಗಲೇ ಮೂರನ್ನು ಈಡೇರಿಸಿದ್ದು, ತಿಂಗಳಾಂತ್ಯಕ್ಕೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಮುಂದಿನ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯಲಿದ್ದು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೆಚ್ಚಿನ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಜನರಿಗೆ ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಪಕ್ಷ ಸಂಘಟಿತವಾಗಬೇಕಾದರೆ, ಸಹಕಾರ ಕ್ಷೇತ್ರವನ್ನು ನಮ್ಮ ಹಿಡಿತಕ್ಕೆ ಪಡೆಯಬೇಕಿದೆ. ಇದರಿಂದ ಮುಂದಿನ ಸ್ಥಳೀಯ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯ. ಯಾವುದೇ ಸಮಸ್ಯೆಗಳಿದ್ದರೂ, ನನ್ನ ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತಂದಲ್ಲಿ ಸ್ಥಳಕ್ಕೆ ಅಧಿಕಾರಿಗಳನ್ನು ಕರೆತಂದು ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ವಹಿಸಿದ್ದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಟಿ.ಪಿ. ರಮೇಶ್. ಕೆ.ಎಂ. ಲೋಕೇಶ್, ಬಿ.ಈ. ಜಯೇಂದ್ರ, ಎಸ್.ಎಂ. ಡಿಸಿಲ್ವ, ಶಾಂತಪ್ಪ, ಎಸ್.ಎಂ. ಚಂಗಪ್ಪ, ಮಿಥುನ್ ಹಾನಗಲ್ಲು, ಸಂಜಯ್ ಜೀವಿಜಯ ಮತ್ತಿತರರು ಇದ್ದರು.