ಭೌತಿಕ ಬದುಕಿಗೆ ಧರ್ಮಾಚರಣೆ ಅಗತ್ಯ

5eef4b5e-5359-4858-b5df-3bbf9e51f911
Published on

ಬೀದರ್: ಹಲವು ಜನ್ಮಗಳ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಅರಿವು ಆದರ್ಶಗಳಿಂದ ಬದುಕು ಸಮೃದ್ಧಗೊಳಿಸಿಕೊಳ್ಳಬೇಕು. ಭೌತಿಕ ಬದುಕು ಅಧ್ಯಾತ್ಮದ ಅರಿವು ಮತ್ತು ಧರ್ಮಾಚರಣೆಯಿಂದ ಉಜ್ವಲವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ನಗರ ಹೊರವಲಯದ ಕೋಳಾರ(ಕೆ) ವ್ಯಾಪ್ತಿಯ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಅಧಿಕ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಬದುಕು ಸುಂದರ ಮನೆಯ ಕಿಟಕಿ ಇದ್ದಂತೆ. ತೆರೆದರೆ ಬೆಳಕು, ಇಲ್ಲದಿದ್ದರೆ ಕತ್ತಲು. ಹಾಗೆಯೇ ಮನುಷ್ಯ ಶ್ರಮಪಟ್ಟರೆ ಸುಖ, ಇಲ್ಲದಿದ್ದರೆ ದುಃಖ ಎಂದರು.
ಪೆಟ್ಟು ತಿಂದ ಕಲ್ಲು ಸುಂದರ ಮೂರ್ತಿ ಯಾಗುತ್ತದೆ. ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯುತ್ತದೆ. ನೋವು ಕೊಡುವವರು ಹಾಗೆಯೇ ಇರುತ್ತಾರೆ. ನೋವುಂಡವರು ಜ್ಞಾನಿಗಳಾಗುತ್ತಾರೆ. ಸಂಸ್ಕಾರ, ಸಂಸ್ಕೃತಿ ಆಚರಣೆಯಿಂದ ಜೀವನ ಉಜ್ವಲವಾಗಲು ಸಾಧ್ಯ. ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಿಂದ ಈ ಭಾಗದಲ್ಲಿ ಆಧ್ಯಾತ್ಮ ಚಿಂತನಗಳು ಜನ ಮನಕ್ಕೆ ಮುಟ್ಟಲಿ ಎಂದು ಹಾರೈಸಿದರು.
ಹುಡುಗಿ ಹಿರೇಮಠದ ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯರು ಮಾತನಾಡಿ, ಒತ್ತಡದಲ್ಲಿ ಸಿಲುಕಿರುವ ಮನುಷ್ಯನಿಗೆ ಮಾನಸಿಕ ಶಾಂತಿ, ನೆಮ್ಮದಿ ಇಲ್ಲವಾಗಿದೆ. ಶ್ರೀಗುರುವಿನ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಶ್ರೀ ರಂಭಾಪುರಿ ಜಗದ್ಗುರುಗಳು ಮೂರು ದಿನ ಲೋಕ ಕಲ್ಯಾಣಾರ್ಥ ಇಷ್ಟಲಿಂಗ ಪೂಜಾ ಮಹೋತ್ಸವ ಹಮ್ಮಿಕೊಂಡಿದ್ದು ಭಕ್ತರ ಸೌಭಾಗ್ಯ ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಪುಣ್ಯಾಶ್ರಮದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ 10 ಲಕ್ಷ ಅನುದಾನ ನೀಡುವುದಾಗಿ ಹೇಳಿದರು. ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ಅಭಿವೃದ್ಧಿ ಮತ್ತು ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.
ಮೆಹಕರದ ಶ್ರೀ ರಾಜೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ತಮಲೂರದ ಶ್ರೀ ಶಿವಾನಂದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ. ಗಣಪತಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ, ಪ್ರಮುಖರಾದ ಶಿವಕುಮಾರ ಸ್ವಾಮಿ ಬಂಬುಳಗಿ, ನಾಗಭೂಷಣ ಕಮಠಾಣ, ಸುರೇಶ ಮಾಶೆಟ್ಟೆ, ಚಂದ್ರಯ್ಯ ಸ್ವಾಮಿ, ಪ್ರಶಾಂತ ಇತರರಿದ್ದರು. ಶಿವಕುಮಾರ ಸ್ವಾಮಿ ಸ್ವಾಗತಿಸಿದರು. ಖಜಾಂಚಿ ಶ್ರೀಕಾಂತ ಸ್ವಾಮಿ ಸೋಲಪುರ ನಿರೂಪಣೆ ಮಾಡಿದರು. ನಿರ್ದೇಶಕ ಕಾರ್ತಿಕ್ ಮಠಪತಿ ವಂದಿಸಿದರು.
ಈ ವೇಳೆ ಶ್ರೀ ಜಗದ್ಗುರು ರೇಣುಕಾಚಾರ್ಯ ಭವ್ಯ ಮಂದಿರವನ್ನು ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿದರು. 80 ವೀರಮಾಹೇಶ್ವರ ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net