

ಲಕ್ಷ್ಮೇಶ್ವರ: ಭೋವಿ ಸಮಾಜವನ್ನು ಎಸ್ಸಿ ಮೀಸಲು ಪಟ್ಟಿಯಿಂದ ಕೈಬಿಡದಂತೆ ಕೇಂದ್ರ ಸರ್ಕಾರ ಮತ್ತು ಕೋರ್ಟ್ಗೆ ಕಾನೂನಾತ್ಮಕ ಶಿಫಾರಸು ಮಾಡಿದ್ದೇನೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಶ್ರೀ ಜ. ರಂಭಾಪುರಿ ಸಮುದಾಯಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ತಾಪಂ., ಪುರಸಭೆ ಹಾಗೂ ತಾಲೂಕು ಭೋವಿ ವಡ್ಡರ ಸಮಾಜದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರ 852 ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೊಡ್ಡ ರಾಜಕೀಯ ಪಕ್ಷದ ಮುಖಂಡರು ಭೋವಿ, ಲಂಬಾಣಿ ಸಮಾಜವನ್ನು ಎಸ್ಸಿ ಮೀಸಲಾತಿಯಿಂದ ತೆಗೆದು ಹಾಕುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಮೈಸೂರು ರಾಜರ ಕಾಲ, ಸ್ವತಂತ್ರ್ಯೂರ್ವ ಹಾಗೂ ಸಂವಿಧಾನ ರಚನೆಗೂ ಪೂರ್ವದಲ್ಲಿ ಭೋವಿ ಸೇರಿ ಇತರ 6 ಜಾತಿಗಳಿಗೆ ಮೀಸಲಾತಿ ಇತ್ತು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಷ್ಠ ಭಾರತ ಚಿಂತನೆಗಳು ಶ್ರೀ ಸಿದ್ಧರಾಮೇಶ್ವರರ ವಚನಗಳ ಸಾರದಲ್ಲಿವೆ. ಬಸವಣ್ಣನವರ ಕಾಯಕವೇ ಕೈಲಾಸ ಸಾರ್ವತ್ರೀಕರಣಗೊಳಿಸುವ ಜತೆಗೆ 4 ಸಾವಿರ ಕೆರೆಗಳನ್ನು ಕೆರೆಯ ಪಕ್ಕ ದೇವಸ್ಥಾನಗಳನ್ನು ನಿರ್ವಿುಸಿ ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಭೋವಿ ವಡ್ಡರ ಸಂಸ್ಥಾನ ಮಠದ ಜ.ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶಿವಯೋಗಿ ಸಿದ್ಧರಾಮೇಶ್ವರರು ಕಾಯಕ ಸಿದ್ಧಾಂತದ ಮಹತ್ವ ಸಾರುವ ಜತೆಗೆ ಸಮಾಜದಲ್ಲಿ ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ವಚನಗಳ ಮೂಲಕ ಹೋಗಲಾಡಿಸಿದರು. ಸಿದ್ಧರಾಮೇಶ್ವರರ ವಚನಗಳ ಆದರ್ಶ ಚಿಂತನೆ, ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಹಿತಿ ಎಫ್.ಎಸ್. ಕರಿದುರಗಣ್ಣವರ ಉಪನ್ಯಾಸ ನೀಡಿದರು. ಭೋವಿ ವಡ್ಡರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ರವಿ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ನಿಗಮದ ಅಧ್ಯಕ್ಷ ರವಿಕುಮಾರ ಭೋವಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ, ಡಾ.ಬಸವರಾಜ ಬಳ್ಳಾರಿ, ರಮೇಶ ಪಾತ್ರೋಟ, ಹುಚ್ಚಪ್ಪ ಸಂದಕದ, ಪುರಸಭೆ ಮಾಜಿ ಅಧ್ಯಕ್ಷೆ ಜಯಕ್ಕ ಕಳ್ಳಿ, ನಿರ್ಮಲಾ ಬರದೂರ, ಹೊನ್ನಪ್ಪ ವಡ್ಡರ, ಅರ್ಜುನ ಹಂಚಿನಮನಿ, ನೀಲಪ್ಪ ಶರಸೂರಿ, ಲೋಕೇಶ ಸುತಾರ, ಭೀಮಣ್ಣ ಯಂಗಾಡಿ, ತಾಲೂಕು ಅಧ್ಯಕ್ಷ ರಾಜು ಕಳ್ಳಿ, ಮಲ್ಲೇಶ ವಡ್ಡರ, ಇತರರಿದ್ದರು. ಎಫ್.ಎಚ್.ಮುದಗಲ್ ಸ್ವಾಗತಿಸಿದರು. ಐ.ಎಚ್. ಮುದಗಲ್ ನಿರೂಪಿಸಿದರು. ಪಟ್ಟಣದದಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.
ಲಕ್ಷ್ಮೇಶ್ವರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ದರಾಮೇಶ್ವರ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಭವ್ಯ ಮೆರವಣಿಗೆ ಯಶಸ್ವಿಯಾಗಿದೆ. ಸಮಾಜದ ಎಲ್ಲರ ಸಹಕಾರದಿಂದ ಅತ್ಯಂತ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ನಡೆಯಲು ಸಾಧ್ಯವಾಯಿತು. ಇದರಿಂದ ಸಮಾಜವಲ್ಲಿ ಪರಸ್ಪರ ಸ್ನೇಹ-ಬಾಂಧವ್ಯ, ಸೌಹಾರ್ದ ಮನೋಭಾವ ಮೂಡಿದಂತಾಗಿದೆ. ಇಮ್ಮುಡಿ ಶ್ರೀಗಳ ಆಶೀರ್ವಾದದಿಂದ ಸಮಾಜದ ಬಗ್ಗೆ ಹೆಮ್ಮೆ, ಹುರುಪು ಬಂದಿದೆ. | ರಾಜು ಕಳ್ಳಿ, ಭೋವಿ ವಡ್ಡರ ಸಂಘದ ತಾಲೂಕಾಧ್ಯಕ್ಷ, ಲಕ್ಷ್ಮೇಶ್ವರ