

ಮೈಸೂರು: ನಗರದ ಕಾಫಿ ಬೋರ್ಡ್ ಬಳಿ ಇರುವ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್ 8ನೇ ಆವೃತ್ತಿಯ ‘ಭೋವಿ ಯುವಸಂಗಮ’ ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ನಡೆಯಿತು.
ಟೂರ್ನಿಯಲ್ಲಿ ಮೈಸೂರು ಮಹಾರಾಜ, ಹುಣಸೂರಿನ ಶ್ರೀ ವೆಂಕಟೇಶ್ವರ ಕ್ರಿಕೆಟರ್ಸ್, ತುಮಕೂರು ಹ್ಯಾಮರ್ಸ್, ಶಿವಮೊಗ್ಗದ ಎ.ಎಫ್.ಸಿ.ಹಂಟರ್ಸ್, ಶಿವಮೊಗ್ಗ ವಾರಿಯರ್ಸ್, ಅರಸೀಕೆರೆಯ ಜಯ ಕರ್ನಾಟಕ, ತುಮಕೂರಿನ ಅಶ್ವಮೇಧ, ವಿಜಯಪುರದ ಆಲಮಟ್ಟಿ ವಿ.ಸಿ.ಸಿ. ತಂಡ, ಬೆಂಗಳೂರಿನ ಎಪಿಸಿ ಮತ್ತು ಯುಎಸ್‌ಎಂ ರಾಯಲ್ಸ್, ಚಿಕ್ಕಬಳ್ಳಾಪುರದ ಆರ್‌ಎಚ್‌ಎಲ್, ಚಿತ್ರದುರ್ಗದ ಎಸ್‌ಆರ್‌ಸಿ, ನೆಲಮಂಗಲದ ಗಂಗೆ ಬಾಯ್ಸ, ಶಿರಾ ಮುದ್ದಕನಹಳ್ಳಿ ಎಂಪಿಸಿಸಿ ಸೇರಿದಂತೆ 16 ತಂಡಗಳು ಭಾಗವಹಿಸಿದ್ದವು.
ಅಂತಿಮವಾಗಿ ತುಮಕೂರಿನ ಅಶ್ವಮೇಧ ತಂಡ ವಿಜೇತ ತಂಡವಾಗಿ ಹೊರಹೊಮ್ಮಿತು. ರನ್ನರ್ ಅಪ್ ತಂಡವಾಗಿ ವಿಎಸ್‌ಎಂ ರಾಯಲ್ಸ್ ಹೊರಹೊಮ್ಮಿತ್ತು.
ಬಹುಮಾನ ವಿತರಣೆ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಯುವಕರನ್ನು ವಿಶಾಲ ದೃಷ್ಟಿಕೋನದ ಮೂಲಕ ಸಜ್ಜುಗೊಳಿಸಬೇಕಾದ ಅಗತ್ಯವಿದೆ. ಸಮಾಜ ಸೇವೆಯ ಉದಯೋನ್ಮುಖ ನಾಯಕರ ಹುಡುಕಾಟಕ್ಕಾಗಿ ಹುಟ್ಟಿಕೊಂಡ ಈ ಕ್ರೀಡಾಕೂಟ ಈಗ ‘ಯುವಶಕ್ತಿ ಸಂಘಟನೆ’ಯಾಗಿ ರೂಪುಗೊಂಡಿದೆ.
ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ಅವಶ್ಯಕವಾಗಿದೆ. ಪ್ರತಿದಿನ ಚೈತನ್ಯದಿಂದಿರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಿತ್ಯದ ಬದುಕಿನ ಜೀವನಶೈಲಿಯಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಬದುಕು ಬಹಳ ಸ್ಪರ್ಧಾತ್ಮಕವಾದದು. ಇಲ್ಲಿ ಗೆಲ್ಲಲು ಸಾಕಷ್ಟು ಜನ ನಿತ್ಯ ಹೋರಾಟ ಮಾಡುತ್ತಲೇ ಇರುತ್ತಾರೆ. ಆದರೆ ಗೆಲುವೆಂಬುದು ಅಷ್ಟು ಸುಲಭವಾಗಿ ಯಾರ ಕೈಗೂ ಸಿಗದೇ ತುಂಬ ಆಟವಾಡಿಸುತ್ತದೆ. ಗೆಲ್ಲಲೇಬೇಕೆಂಬ ಅದಮ್ಯ ಆಸೆ, ಸತತ ಪ್ರಯತ್ನ ಹಾಗೂ ಪ್ರಾಮಾಣಿಕವಾದ ಹೋರಾಟದಿಂದ ಗೆಲುವನ್ನು ಪಡೆಯಬಹುದು. ಸೋಮಾರಿಗಳಿಗೆ, ಆಲಸ್ಯ ವ್ಯಕ್ತಿಗಳಿಗೆ ಯಾವತ್ತಿಗೂ ಈ ಗೆಲುವು ಒಲಿಯುವುದಿಲ್ಲ ಎಂದರು.
ಜೀವನದಲ್ಲಿ ಸವಾಲುಗಳನ್ನೇ ಎದುರಿಸದೆ ವೇಗವಾಗಿ ಗೆಲುವನ್ನು ಕಂಡಾಗ ಕೆಲವೊಮ್ಮೆ ನಮಗೆ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಮ್ಮ ಚಿಂತನೆ, ದೃಷ್ಟಿಕೋನಗಳು ಪಕ್ವವಾಗಿರುವುದಿಲ್ಲ. ಆದ್ದರಿಂದ ಹಿರಿಯರು ಸೋಲೇ ಗೆಲುವಿನ ಸೋಪಾನ ಎಂದು ಆನಾದಿ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ. ಅದಕ್ಕೆ ಸೋತು ಗೆಲ್ಲುವುದನ್ನು ಕಲಿಯಬೇಕು ಎಂದು ಹೇಳಿದರು.
ಜೀವನದಲ್ಲಿ ಉನ್ನತ ಗುರಿಯ ಬೆನ್ನೇರಿ ಹೊರಟಾಗ ಏಳುಬೀಳು ಸಹಜ. ಉನ್ನತ ಮಟ್ಟದಲ್ಲಿರುವವರ ಜೀವನವನ್ನು ವಿಶ್ಲೇಷಿಸಿದರೆ ಬೀಳುಗಳನ್ನು ಕಾಣದೆ ತಮ್ಮ ಗುರಿಯನ್ನು ತಲುಪಿದ ಉದಾಹರಣೆಗಳು ತೀರ ವಿರಳ. ಸಾಧನೆಯ ಹಾದಿಯಲ್ಲಿ ಕಷ್ಟಗಳನ್ನು ಎದುರಿಸಿದಾಗಲೇ ನಾವು ಮುಂದೆ ಬರುವ ಅನಿಶ್ಚಿತ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯ ಎಂದರು.
ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು, ಮುಖಂಡರಾದ ಪಾಲಾಕ್ಷಮೂರ್ತಿ, ಬಸವರಾಜ, ವಿಜಯಕುಮಾರ್, ಮೀನಾಕ್ಷ, ಶಿವು ಇತರರು ಇದ್ದರು.