ಭೋವಿ ನಿಗಮ ಬಡವರ ಬದುಕಿಗೆ ಬೆಳಕಾಗಲಿ

CTD BOVI SRI----
Published on

ಚಿತ್ರದುರ್ಗ: ರಾಜ್ಯ ಭೋವಿ ಅಭಿವೃದ್ಧಿ ನಿಗಮ, ಸಮುದಾಯದ ಬಡವರ ಬದುಕಲ್ಲಿ ಬೆಳಕಾಗಲಿ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಹೊಳಲ್ಕೆರೆ ತಾಲೂಕು ಬೋರನಹಳ್ಳಿಯಲ್ಲಿ ಗುರುವಾರ, ಅಂಗವಿಕಲ ಮಕ್ಕಳನ್ನು ಹೊಂದಿರುವ ಹುಲುಗಮ್ಮ ಚಂದ್ರಪ್ಪ ದಂಪತಿಗೆ ನಿಗಮದಿಂದ ಮಂಜೂರಾದ 3 ಲಕ್ಷ ರೂ. ಸಹಾಯಧನದ ಕಾರ್ಯಾದೇಶ ವಿತರಿಸಿ ಮಾತನಾಡಿದರು.

ಕಣ್ಣು, ಬಾಯಿ ಇಲ್ಲದ ಮಕ್ಕಳ ಪೋಷಣೆಗಾಗಿ ಪಾಲಕರಿಗೆ ನಿಗಮ ಸಹಾಯಧನ ಮಂಜೂರು ಮಾಡಿದೆ. ಈ ನೆರವು ಅಂಗಡಿ ನಡೆಸಲು ಕುಟುಂಬಕ್ಕೆ ಸಹಕಾರಿಯಾಗಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹೀಗೆ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ನಿಗಮ ಸಹಾಯ ಹಸ್ತ ಚಾಚಬೇಕಿದೆ ಎಂದರು.

ಅಲೆಮಾರಿ ಕುಟುಂಬ ವ್ಯವಸ್ಥೆ ಭೋವಿ ಸಮುದಾಯದ್ದಾಗಿದೆ. ಜೀವನಕ್ಕಾಗಿ ಅಲೆಯುವ ಕುಟುಂಬಗಳಿಗೆ ನಿಗಮದ ಯೋಜನೆಗಳು ಆಸರೆಯಾಗಬೇಕು. ಬಡ ಕುಟುಂಬಗಳು ವಲಸೆ ಜೀವನ ಬಿಟ್ಟು ಒಂದೆಡೆ ಸೇರಿ ಬದುಕು ನಡೆಸುವಂತಾಗಬೇಕೆಂದು ಶ್ರೀಗಳು ಆಶಿಸಿದರು.

ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿ, ಇಂತಹ ಕುಟುಂಬಗಳನ್ನು ಗುರುತಿಸಿ ತಿಳಿಸಿದರೆ ಸಂಕಷ್ಟದಲ್ಲಿ ಇರುವಂಥವರ ಸೇವೆ ಮಾಡಲು ಸಾಧ್ಯವಾಗುತ್ತದೆ. ನಿಗಮ ಬಡವರ ಪರ ನಿರಂತರವಾಗಿ ಕಾರ‌್ಯ ನಿರ್ವಹಿಸುತ್ತಿದೆ ಎಂದರು.

ಭೋವಿ ಗುರುಪೀಠದಿಂದ ಕುಟುಂಬಕ್ಕೆ ದವಸ ಧಾನ್ಯ ವಿತರಿಸಲಾಯಿತು. ಪಾಲಕರು ಮತ್ತು ಗ್ರಾಮಸ್ಥರು, ಭೋವಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net