ಭೋಗನಂದೀಶ್ವರ ಆಲಯ ಅರ್ಚಕರಿಬ್ಬರಿಗೆ ಸೋಂಕು ದೃಢ, ದೇಗುಲ ಕ್ವಾರಂಟೈನ್ ಪ್ರದೇಶ

3CBP1
Published on

ಚಿಕ್ಕಬಳ್ಳಾಪುರ: ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರ ಆಲಯದ ಅರ್ಚಕರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಶಂಕಿತರ ಪರೀಕ್ಷೆ, ದೇಗುಲದ ಸುತ್ತಲು ಸ್ಯಾನಿಟೈಸ್ ಮಾಡಿರುವ ಜತೆಗೆ ಕ್ವಾರಂಟೈನ್ ಪ್ರದೇಶವನ್ನಾಗಿ ಘೋಷಿಸಲಾಗಿದೆ.

ನಾಲ್ಕೈದು ದಿನಗಳ ಹಿಂದೆ ಆಲಯದ ಅರ್ಚಕರಿಬ್ಬರಿಗೆ ಕರೊನಾ ದೃಢಪಟ್ಟಿದ್ದರೂ ತಾಲೂಕು ಆಡಳಿತ, ತಾಲೂಕು ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸೋಂಕು ನಿಯಂತ್ರಣಕ್ಕೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಹಾಗೂ ಶಂಕಿತರಿಗೆ ಪರೀಕ್ಷೆ ನಡೆಸದಿರುವ ಬಗ್ಗೆ ಸೆ. 3ರಂದು ವಿಜಯವಾಣಿ ‘ಸೋಂಕು ಪತ್ತೆಯಾದರೂ ನಿರ್ಲಕ್ಷ್ಯ’ ಶೀರ್ಷಿಕೆಯ ವರದಿ ಮೂಲಕ ಗಮನ ಸೆಳೆದಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಬೆಳಗ್ಗೆ ಆಲಯದ ಆವರಣದಲ್ಲಿ ಸ್ಯಾನಿಟೈಸ್ ಮಾಡಿದ್ದಾರೆ. ಜತೆಗೆ ಶಂಕಿತರನ್ನು ಪರೀಕ್ಷೆಗೊಳಪಡಿಸಿದ್ದಾರೆ.

ಈಗಾಗಲೇ ಕರೊನಾ ಅನ್‌ಲಾಕ್ 4ರ ಮಾರ್ಗಸೂಚಿಯಲ್ಲಿ ಆಲಯಗಳಲ್ಲಿ ಹೋಮ ಪೂಜೆ, ತೀರ್ಥ ಪ್ರಸಾದ ವಿನಿಯೋಗಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರು ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸೋಂಕು ಹರಡುವ ಆತಂಕ ಜನರಲ್ಲಿ ಮೂಡಿತ್ತು. ಆದ್ದರಿಂದ ಆಲಯದ ಪ್ರವೇಶ ದ್ವಾರಕ್ಕೆ ಬೀಗ ಜಡಿದು ಕ್ವಾರಂಟೈನ್ ಪ್ರದೇಶ ಎಂದು ಘೋಷಿಸಿದ್ದಾರೆ.

ಈಗಲಾದರೂ ಸೋಂಕಿತರು ಪತ್ತೆಯಾದ ನಂದಿ ದೇವಾಲಯಕ್ಕೆ ಅಧಿಕಾರಿಗಳು ಭೇಟಿ ನೀಡಿ, ಸುರಕ್ಷತೆ ಕ್ರಮಗಳನ್ನು ಕೈಗೊಂಡಿರುವುದು ಸಂತಸದ ವಿಚಾರ. ಆರ್.ಮಂಜುನಾಥ್, ನಂದಿ ಭೋಗನಂದೀಶ್ವರ ಸ್ವಾಮಿ ವ್ಯವಸ್ಥಾಪನಾ ಸಮಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net