

ಸಾಲಿಗ್ರಾಮ: ಯಾರು ಏನೇ ಮಾಡಿದರೂ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಉಳಿಸುವ ಮೂಲಕ ಭೇರ್ಯ ಗ್ರಾಮವನ್ನು ಸಮರ್ಪಕವಾಗಿ ಅಭಿವೃದ್ಧಿ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಭೇರ್ಯ ಗ್ರಾಮದಲ್ಲಿ ಸೋಮವಾರ ಸಾರ್ವಜನಿಕರ ಕುಂದುಕೊರತೆ ಆಲಿಸಿ ಮಾತನಾಡಿದ ಅವರು, ಗ್ರಾಮಕ್ಕೆ ಹಲವು ವರ್ಷಗಳಿಂದ ಯಾವುದೇ ಮೂಲಸೌಲಭ್ಯ ದೊರೆತಿಲ್ಲ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಹೆಚ್ಚು ಅನುದಾನ ಕೊಡಿಸುವ ಮೂಲಕ ಅಭಿವೃದ್ಧಿ ಮಾಡಲಾಗುತ್ತದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಪ್ರತಿಯೊಬ್ಬರೂ ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಿ ಎಂದು ಸಲಹೆ ನೀಡಿದರು.
ಕೆಲವು ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಮಾರ್ಗಗಳು ತಿಳಿಯದೆ ಎಲ್ಲ ಕಡೆ ಅಲೆಯುತ್ತಿದ್ದಾರೆ. ಅಂತಹವರಿಗೆ ಯೋಜನೆ ಬಗ್ಗೆ ತಿಳಿದ ಜನರು ಅರಿವು ಮೂಡಿಸುವಂತಹ ಕೆಲಸ ಮಾಡಬೇಕು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಮೂಲಕ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಸಾಗುತ್ತಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಕೂಡ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಭೇರ್ಯ ಗ್ರಾಮದ ಕೆರೆ ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡಿ ಅಭಿವೃದ್ಧಿ ಮಾಡಬೇಕು. ಗ್ರಾಮಗಳಲ್ಲಿ ರಸ್ತೆಗಳು ಮತ್ತು ಚರಂಡಿಗಳಿಲ್ಲದೆ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಹೋಬಳಿ ಕೇಂದ್ರವನ್ನಾಗಿಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಭೇರ್ಯದಲ್ಲೇ ಉಳಿಸಬೇಕು. ವೃತ್ತಿಪರ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಡಬೇಕು, ಆಶ್ರಯ ನಿವೇಶನ ಮತ್ತು ಆಶ್ರಯ ಮನೆಗಳು ಸೇರಿದಂತೆ 10 ಹಲವು ಸಮಸ್ಯೆಗಳನ್ನ ಬಗೆಹರಿಸಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಕೃಷ್ಣೇಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಶಾಸಕ ಡಿ.ರವಿಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಕುಮಾರ್, ಸಿ.ವಿ. ಗುಡಿ ರಮೇಶ್, ರಾಜಶೇಖರ್, ಮಂಜಪ್ಪ, ಬಿ.ಪಿ.ಪ್ರಕಾಶ್, ಹರ್ಷವರ್ಧಿನಿ, ತಾಯಮ್ಮ, ಶಿವಣ್ಣ, ಪಿಡಿಒ ಮಂಜುನಾಥ್, ಜಯಂತ್, ಕೃಷ್ಣ, ನಾಗೇಂದ್ರನಾಯಕ, ಮಾದೇವನಾಯಕ, ಶ್ರೀನಿವಾಸ್, ಪ್ರೇಮ್ ಕುಮಾರ್, ವಿಎಸ್‌ಎಸ್ ಮಾಜಿ ಅಧ್ಯಕ್ಷ ಬಿಎಂ ಪ್ರಕಾಶ್, ಶಾಸಕರ ಆಪ್ತ ಕಾರ್ಯದರ್ಶಿ ನವೀನ್, ಪುನೀತ್, ಗ್ರಾಮದ ಮುಖಂಡರಾದ ಅನಿಲ್, ಹರೀಶ್, ಸಿ ಭೇರ್ಯ ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು.