ಭೇದವಿಲ್ಲದೆ ಗ್ಯಾರಂಟಿ ಯೋಜನೆ ಸೌಲಭ್ಯ

kdr coll
ಕಡೂರು ತಾಪಂ ಕಚೇರಿ ಆವರಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಆಸಂದಿ ಕಲ್ಲೇಶ್, ಕೆ.ಪಿ.ಅಂಶುಮಂತ್, ಭಂಡಾರಿ ಶ್ರೀನಿವಾಸ್, ಎಂ.ಸಿ.ಶಿವಾನಂದಸ್ವಾಮಿ, ಮಂಜುನಾಥಸ್ವಾಮಿ, ಸಿ.ಆರ್.ಪ್ರವೀಣ್ ಇತರರಿದ್ದರು.
Published on

ಕಡೂರು: ತಾಲೂಕಿನಾದ್ಯಂತ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಶೇ.100 ಅನುಷ್ಠಾನಗೊಂಡಿವೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಶನಿವಾರ ತಾಪಂ ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ಪಕ್ಷ ಅಥವಾ ಧರ್ಮ ನೋಡದೆ ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆ ನೀಡಿದೆ. ಯೋಜನೆ ತಾಲೂಕಿನಲ್ಲಿ ಹೆಚ್ಚು ಫಲಪ್ರದವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿ ಹೋಬಳಿಯಲ್ಲಿಯೂ ಜನಸ್ಪಂದನ ಸಭೆ ಆಯೋಜಿಸಿ ಸಮಸ್ಯೆಗಳಿದ್ದರೆ ಪರಿಹರಿಸಲಾಗಿದೆ. ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂದು ವಿರೋಧಿಗಳು ಟೀಕಿಸಿದರು. ಅವರೆಲ್ಲರಿಗೂ ಈಗ ಸೂಕ್ತ ಉತ್ತರ ದೊರೆತಿದೆ. ಗ್ಯಾರಂಟಿ ಯೋಜನೆಗಳಿಂದಲೇ ನಾವು ಜನರಿಗೆ ಇನ್ನಷ್ಟು ಹತ್ತಿರವಾಗಿದ್ದೇವೆ ಎಂದು ಹೇಳಿದರು.

ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಪ್ರವಾಸಿ ಮಂದಿರಕ್ಕೆ ಬೇರೆ ಜಾಗ ನೀಡಿ ಆ ಜಾಗವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಚಿಂತನೆ ನಡೆಸಲಾಗಿದೆ. ಎಲ್ಲ ಕಚೇರಿಗಳೂ ಒಂದೆಡೆ ಇರುವಂತಹ ಹೊಸ ತಾಲೂಕು ಕಚೇರಿ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿದೆ ಎಂದರು.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 80 ಸಾವಿರ ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಜನರ ಹಣವನ್ನು ಜನರಿಗೇ ನೀಡುವ ಗೃಹಲಕ್ಷ್ಮೀ ಯೋಜನೆ, 67 ಸಾವಿರ ಜನರಿಗೆ ಅನ್ನ ಭಾಗ್ಯ ದೊರೆಯುತ್ತಿದೆ. ಯುವನಿಧಿ ತಾಲೂಕಿನಲ್ಲಿ 3 ಸಾವಿರ ಜನರಿಗೆ ದೊರೆಯುತ್ತಿದೆ. ಈ ಐದೂ ಗ್ಯಾರಂಟಿಗಳಿಗೆ ಜಿಲ್ಲೆಯಲ್ಲಿ 85 ಕೋಟಿ ರೂ. ವೆಚ್ಚವಾಗುತ್ತಿದೆ. ತಾಲೂಕಿನಲ್ಲಿ ಐದೂ ಗ್ಯಾರಂಟಿ ಯೋಜನೆಗಳಿಂದ ಮಾಸಿಕ 28 ಕೋಟಿ ರೂ. ವೆಚ್ಚವಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಗ್ಯಾರಂಟಿ ಯೋಜನೆಗಳು ಹೆಚ್ಚು ವರದಾನವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಮಿತಿಯ ತಂಡ ನಿರಂತರವಾಗಿ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಹಾಗೂ ಶ್ರಮಿಕ ಜೀವಿಗಳ ಏಳ್ಗಿಗೆಗೆ ಸಹಕಾರಿಯಾಗಿದೆ. ತಾಲೂಕು ಕಚೇರಿ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಆದ್ದರಿಂದ ತಾಲೂಕು ಕಚೇರಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯನ್ನು ವೇದಾಪಾರ್ಕ್‌ಗೆ ಸ್ಥಳಾಂತರಕ್ಕೆ ಶಾಸಕರು ಅವಕಾಶ ಮಾಡಿಕೊಟ್ಟರೆ ಪುರಸಭೆಯಿಂದ ಸೂಕ್ತ ಜಾಗ ಕಲ್ಪಿಸಿಕೊಡಲಾಗುವುದು ಎಂದರು.

ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿ, ಸರ್ಕಾರದ ಐದೂ ಗ್ಯಾರಂಟಿಗಳನ್ನು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವ ಅತ್ಯಂತ ಜವಾಬ್ದಾರಿಯುತ ಸ್ಥಾನವನ್ನು ಸಮಿತಿಯ ಎಲ್ಲ ಸದಸ್ಯರ ಸಹಕಾರ ಪಡೆದು ಶಾಸಕರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.

ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಪ್ರಭಾರ ತಹಸೀಲ್ದಾರ್ ಎನ್.ಆರ್.ಮಂಜುನಾಥ್‌ಸ್ವಾಮಿ, ಇಒ ಸಿ.ಆರ್.ಪ್ರವೀಣ್, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಾಸೂರು ಚಂದ್ರಮೌಳಿ, ಮಂಜುನಾಥ್, ತಾಲೂಕು ಸಮಿತಿ ಸದಸ್ಯರಾದ ಪುಷ್ಪ್ಪಾ, ಸಪ್ತಕೋಟಿ ಧನಂಜಯ್, ಸಂತೋಷ್, ರಮೇಶ್ ದಳವಾಯಿ, ಗಿರೀಶ್‌ನಾಯ್ಕ, ಗುಜ್ಜೇನಹಳ್ಳಿ ತಿಪ್ಪೇಶ್, ಚನ್ನಪ್ಪ, ಸೋಮೇಶ್, ಮಧು, ತೌಸಿಬ್, ಶೋಭಾ, ಸುಜಾತಾ, ಮೂರ್ತಿ, ರೋಹನ್ ಫರ್ನಾಂಡಿಸ್, ಮನು, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net