

ಚಿತ್ರದುರ್ಗ: ಬರಗೇರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯರು ಭೇಟಿಯಾಗುವ ದೃಶ್ಯದ ಮಾದರಿಯಲ್ಲಿ ಅಕ್ಕ-ತಂಗಿಯರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಮಂಗಳವಾರ ಭೇಟಿಗೂ ಮುನ್ನ, ನಂತರ ಬುಧವಾರವೂ ಸಾಕಷ್ಟು ಸದ್ದು ಮಾಡಿದೆ.
ವರ್ಷಕ್ಕೊಮ್ಮೆ ಜರುಗುವ ಭೇಟಿಗಾಗಿಯೇ ಚಿತ್ರ ಕಲಾವಿದ ಆರ್.ಎಲ್.ಮನೋಜ್ ದೇವಿಯರಿಬ್ಬರೂ ಮುಖಾಮುಖಿಯಾಗುವ ಸುಂದರ ಚಿತ್ರವನ್ನು ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ.
ಚಿತ್ರವೂ ಪರಸ್ಪರ ಅಕ್ಕ-ತಂಗಿಯರಿಬ್ಬರು ಭೇಟಿಯಾಗಿ ಒಬ್ಬರ ಮುಖವನ್ನು ಮತ್ತೊಬ್ಬರು ನೋಡುತ್ತ ಉಭಯ ಕುಶಲೋಪರಿಯಲ್ಲಿ ತೊಡಗಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಭಕ್ತರಿಂದ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆಗಳು ಕೂಡ ವ್ಯಕ್ತವಾಗುತ್ತಿದೆ.
ಉಚ್ಚಂಗಿಯಲ್ಲಮ್ಮ ದೇಗುಲ ಮುಂಭಾಗದ ರಾಜಬೀದಿ ದೊಡ್ಡಪೇಟೆಯಲ್ಲಿ ಅಕ್ಕತಂಗಿಯರು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭೇಟಿಯಾಗುವ ಚಿತ್ರವನ್ನು ಎರಡು ವರ್ಷದ ಹಿಂದೆ ಹವ್ಯಾಸಿ ಚಿತ್ರ ಕಲಾವಿದ ಮಹಂತೇಶ್ ತ್ರಿವಿಕ್ರಮ ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ಆ ಚಿತ್ರವೂ ಪುನಃ ವೈರಲ್ ಆಗಿದೆ.
ಎರಡೂ ದೇವತೆಗಳಿಗೆ ತೊಡಿಸುವ ಆಭರಣ, ಹಣೆಯ ಮೇಲೆ ಹಚ್ಚುವ ವಿಭೂತಿ, ಕುಂಕುಮ, ತಿಲಕ ಒಳಗೊಂಡು ಉತ್ಸವ ಮೂರ್ತಿಗಳ ಮಾದರಿಯಲ್ಲೇ ಯಥಾವತ್ತು ಚಿತ್ರವನ್ನು ಕಟ್ಟಿಕೊಡುವಲ್ಲಿ ಕಲಾವಿದರು ಸಫಲರಾಗಿದ್ದು, ಹಿಂದಿನ ವರ್ಷದ ಸಾಕ್ಷ್ಯಾಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಭೇಟಿ ನಮ್ಮೂರಿನ ಹೆಮ್ಮೆಯ ಸಾಂಸ್ಕೃತಿಕ ಮಹೋತ್ಸವ. ಅಕ್ಕ-ತಂಗಿಯರ ಉತ್ಸವ ಮೂರ್ತಿಗಳನ್ನು ಚಿತ್ರಿಸುವ ಪುಟ್ಟ ಪ್ರಯತ್ನವಿದು. ನಗುವಿನ ದೈವಿ ಕಳೆಯೂ ಸುಂದರವಾಗಿ ಮೂಡಿಬಂದಿದ್ದು, ಆ ದೇವಿಯರೇ ಕೈಹಿಡಿದು ತಿದ್ದಿಸಿದ್ದಾರೆನೋ ಎಂಬ ಅನುಭೂತಿ ಮೂಡಿದೆ ಎಂದು ಇಬ್ಬರೂ ಕಲಾವಿದರು ತಿಳಿಸಿದರು.
ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಶೇರ್ ಆಗುತ್ತಿದೆ.