ಭೆಂಡಿಗೇರಿ ಅಲ್ಲ ಬೆಳಕಿನ ಕೇರಿ!

21Jaggu3-Web
ಬೆಳಗಾವಿ ತಾಲೂಕಿನ ಭೆಂಡಿಗೇರಿ ಗ್ರಾಮದಲ್ಲಿ ಬಸವಣ್ಣ ಹಾಗೂ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳು ಪಾದಯಾತ್ರೆಗೆ ಚಾಲನೆ ನೀಡಿದರು. ಬಸವರಾಜ ರೊಟ್ಟಿ, ಎ.ವೈ. ಬೆಂಡಿಗೇರಿ, ಶಿವಾನಂದ ದೇವರು, ಓಂ ಗುರೂಜಿ, ಮಲ್ಲಯ್ಯ ಹಿರೇಮಠ ಸ್ವಾಮೀಜಿ ಇತರರಿದ್ದರು.
Published on

ಬೆಳಗಾವಿ: ತಾಲೂಕಿನ ಭೆಂಡಿಗೇರಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಅಖಿಲ ಭಾರತ ಲಿಂಗಾಯತ ಮಹಾಸಭಾ ಬೆಳಗಾವಿ ಘಟಕದಿಂದ ಸೋಮವಾರ ಜನಜಾಗೃತಿ ಪಾದಯಾತ್ರೆ ಮತ್ತು ರುದ್ರಾಕ್ಷಿ ಧಾರಣ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮಿಗಳು ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಗಜ್ಯೋತಿ ಬಸವಣ್ಣ ಹಾಗೂ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆ ಹಿನ್ನೆಲೆಯಲ್ಲಿ ಪ್ರತಿ ಮನೆ ಅಂಗಳದಲ್ಲಿ ಬಿಡಿಸಿದ ರಂಗೋಲಿ ಚಿತ್ತಾರ ಹಾಗೂ ಹೂಗಳಿಂದ ಸಿಂಗರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗಂದಿಗವಾಡದ ಮೃತ್ಯುಂಜಯ ಶ್ರೀಗಳು ಇದು ‘ಭೆಂಡಿಗೇರಿ’ಯಲ್ಲ ‘ಬೆಳಗಿನ’ ಕೇರಿ ಎಂದು ಬಣ್ಣಿಸಿದರು. ಪ್ರತಿದಿನವೂ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗದೆ ಭಾರತೀಯ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಎಂದರು. ಬಸವರಾಜ ರೊಟ್ಟಿ, ನಿವೃತ್ತ ಇಂಜಿನಿಯರ್ ಎ.ವೈ. ಬೆಂಡಿಗೇರಿ ಮಾತನಾಡಿ, ಗ್ರಾಮದಲ್ಲಿ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಅವಶ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಗಮನಹರಿಸಬೇಕಿದೆ ಎಂದರು. ನಾಗರ ಪಂಚಮಿ ನಿಮಿತ್ತ ಶಾಲಾ ಮಕ್ಕಳಿಗೆ ರುದ್ರಾಕ್ಷಿ ಮಠದ ಶ್ರೀಗಳು ಹಾಲು ವಿತರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಶ್ರೀಗಳು ರುದ್ರಾಕ್ಷಿ ಧಾರಣೆ ಮಾಡಿದರು. ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಹಳಿಂಗಳಿ ಕಮರಿ ಮಠದ ಶಿವಾನಂದ ದೇವರು, ಕುಳವಳ್ಳಿಯ ಓಂ ಗುರೂಜಿ, ಬಸವರಾಜ ರೊಟ್ಟಿ, ಮಲ್ಲಯ್ಯ ಹಿರೇಮಠ ಸ್ವಾಮೀಜಿ, ಶಂಕರಯ್ಯ ಸುರುಗಿಮಠ ಸ್ವಾಮೀಜಿ, ಶಿವಾನಂದ ಚಂಡು, ಸಿದ್ದಣ್ಣ ಹಾವನ್ನವರ, ರವೀಂದ್ರ ಮೇಳೇದ, ಸಂತೋಷ ಅಂಗಡಿ, ಶೇಖರ ಮಾಳಾಯಿ, ಪ್ರಕಾಶ ಪಾಟೀಲ, ಬಸವರಾಜ ಡಮ್ಮಣಗಿ, ವಿಕ್ರಮರಾಜ ಡಮ್ಮಣಗಿ, ಮಲ್ಲಪ್ಪ ಕಾದ್ರೊಳ್ಳಿ, ಈರಪ್ಪ ದೊಡಮನಿ, ಗೋಪಾಲ ದೊಡಮನಿ, ಗ್ರಾಮದ ಶಿಕ್ಷಕರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ನಾಗರಾಜ ಮೇಳೇದ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net