

ವಿಜಯಪುರ: ಅವ್ಯಾಹತವಾಗಿ ನಡೆಯುತ್ತಿರುವ ಭೂ ಹಗರಣ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಒಡಿ ತನಿಖೆ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತಿಳಿಸಿದರು.
ಬೆಟ್ಟಿಂಗ್ ದಂಧೆ, ಹಾಡಹಗಲೇ ಕೊಲೆ, ಭೂ ಹಗರಣದ ಮೂಲಕ ವಿಜಯಪುರ ಜಿಲ್ಲೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು, ಹಗರಣಗಳು, ಜೂಜಾಟಗಳು ಜೋರಾಗಿವೆ. ಇದು ಸಾಮಾಜಿಕ ನೆಮ್ಮದಿ ಹಾಳುಗೆಡುವಿದೆ. ಜನ ಆತಂಕಿತರಾಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕೆಲವು ಅಧಿಕಾರಿಗಳು ಹಲವು ವರ್ಷಗಳಿಂದ ಒಂದೇ ಇಲಾಖೆ ಹಾಗೂ ಹುದ್ದೆಯಲ್ಲಿ ಬೀಡು ಬಿಟ್ಟಿದ್ದಾರೆ. ಉಪ ನೋಂದಣಿ ಇಲಾಖೆಯೊಬ್ಬರು ಹಲವು ವರ್ಷಗಳಿಂದ ವರ್ಗಾವಣೆಗೊಂಡಿಲ್ಲ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆ ಅಧಿಕಾರಿ ವರ್ಗವಾಗುವುದಿಲ್ಲವೆಂದರೆ ಇದರಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದಿಲ್ಲ. ಭೂ ಹಗರಣದಲ್ಲಿ ಕೇವಲ ಉಪ ನೋಂದಣಿ ಅಧಿಕಾರಿ ಮಾತ್ರವಲ್ಲ ಬಾಂಡ್ ರೈಟರ್, ಕಂದಾಯ ಇಲಾಖೆ ಅಧಿಕಾರಿಗಳ ಪಾತ್ರವೂ ಈ ಹಗರಣದಲ್ಲಿ ಕಂಡು ಬರುತ್ತಿದೆ. ಹೀಗಾಗಿ ಈ ಭೂಹಗರಣ ಪ್ರಕರಣವನ್ನು ಸಿಒಡಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರೇ ಕೆಲವು ದಿನಗಳ ಹಿಂದೆ ಈ ನಿಟ್ಟಿನಲ್ಲಿ ಸಭೆ ನಡೆಸಿದ್ದರು. ಆ ಬಳಿಕ ಅದರ ಫಲಿತಾಂಶ ಬರಲೇ ಇಲ್ಲ. ಪ್ರಕರಣಕ್ಕೂ ಕಡಿವಾಣ ಬಿದ್ದಿಲ್ಲ. ಹೀಗಾಗಿ ದುಡಿದು ಹಣ ಹೊಂದಿಸಿ ಜಮೀನು ಖರೀದಿಸಿದ ಬಡ ಜನತೆ ಆತಂಕಕ್ಕೊಳಗಾಗಿದ್ದಾರೆ. ಬಹಳಷ್ಟು ಜನ ಮೋಸ ಹೋಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸಿಒಡಿ ತನಿಖೆ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವುದರ ಜೊತೆಗೆ ಅಕ್ರಮಕ್ಕೆ ಶಾಶ್ವತವಾಗಿ ಕಡಿವಾಣ ಹಾಕಬೇಕು ಎಂದ ಪಟ್ಟಣಶೆಟ್ಟಿ, ಈಗಾಗಲೇ ನಾನೂ ಸಹ ಭೂ ಹಗರಣ ತಡೆಗೆ ಸಿಒಡಿ ತನಿಖೆ ನಡೆಸಲು ಹಿಂದಿನ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.
ಇದೀಗ ಮುಂದವರಿದ ಪ್ರಕರಣದಲ್ಲಿ ನ್ಯಾಯ ಕಲ್ಪಿಸಲು ಸಿಒಡಿ ತನಿಖೆ ನಡೆಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು. ಹಾಗೊಂದು ವೇಳೆ ಸಿಒಡಿಗೆ ವಹಿಸದೇ ಇದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ಎಲ್ಲ ಸಮಾಜದವರು, ಗುಂಡಾಗಳು, ಪ್ರಭಾವಿಗಳು ಭೂ ಹಗರಣದ ಹಿಂದೆ ಇದ್ದಾರೆ. ಆಸ್ತಿ ಮಾಲೀಕರ ವಿವರ ಕಲೆ ಹಾಕಿ, ಖೊಟ್ಟಿ ದಾಖಲೆ ಸೃಷ್ಠಿಸಿ ಉಪ ನೋಂದಣಿ ಅಧಿಕಾರಿಗಳ ಸಹಾಯದಿಂದ ಜಮೀನು ಕಬಳಿಸುವ ದೊಡ್ಡ ಗ್ಯಾಂಗ್ ಇದೆ. ಸುಮಾರು 200 ಪ್ರಕರಣಗಳು ದಾಖಲಾಗಿವೆ. ತಹಸೀಲ್ದಾರ್ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಒಳಗೊಂಡ ದೊಡ್ಡ ಜಾಲ ಇದರಲ್ಲಿದೆ ಎಂದರು.
ಇನ್ನು ಬೆಟ್ಟಿಂಗ್ ದಂಧೆ ನಡೆಸುವವರು ರಾಜಕೀಯ ಪಕ್ಷಗಳ ಧುರೀಣರಾಗಿದ್ದಾರೆ. ಹೀಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬೆಟ್ಟಿಂಗ್ ದಂಧೆಯಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಯುವಜನತೆ ದಾರಿ ತಪ್ಪುತ್ತಿದೆ. ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದರು.