ಭೂಸ್ವಾಧೀನಕ್ಕೆ ಹದಿನೈದು ದಿನ ಗಡುವು

2
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲು ತುಮಕೂರು ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ

ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿದರು.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಂಗಳವಾರ ನೆಲಮಂಗಲದ ಜಾಸ್ ಟೋಲ್ ಬಳಿ ಭೇಟಿ ನೀಡಿದ ವಿ.ಸೋಮಣ್ಣ, ಹೆದ್ದಾರಿ 48ರ ಸ್ಥಿತಿಗತಿ, ಕಾಮಗಾರಿ ವಿಳಂಬದ ಬಗ್ಗೆ ಮಾಹಿತಿ ಪಡೆದರು.

ಅಧಿಕಾರಿಗಳಿಗೆ ತರಾಟೆ: 2015ರಲ್ಲಿ ರಾ.ಹೆದ್ದಾರಿ ಪ್ರಾಧಿಕಾರದಿಂದ 6 ಪಥದ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಿದ್ದು, ಬೇಜವಾಬ್ದಾರಿಯಿಂದ

ಕಾಮಗಾರಿ ವಿಳಂಬ ಮಾಡಿದ್ದ ಅಧಿಕಾರಿಗಳಿಗೆ ಸೋಮಣ್ಣ ಏಕವಚನದಲ್ಲಿ ತರಾಟೆ ತಗೆದುಕೊಂಡರು.

ಹೆದ್ದಾರಿಯಲ್ಲಿ ನಾಲ್ಕು ಕಡೆ 15 ದಿನದೊಳಗೆ ಭೂಸ್ವಾಧೀನ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಜತೆಗೆ ಮುಂದಿನ 10 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದು, ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ರೈತರ ಖಾತೆಗೆ ಜಮೆಯಾಗದ ಹಣ: ವಿ.ಸೋಮಣ್ಣ ಆಗಮನದ ಹಿನ್ನೆಲೆಯಲ್ಲಿ ಕುಲುವನಹಳ್ಳಿ ಬಳಿ ಸಮಾವೇಶಗೊಂಡಿದ್ದ ಸ್ಥಳೀಯರು, ಹೆದ್ದಾರಿ ಪ್ರಾಧಿಕಾರದಿಂದ ಭೂಸ್ವಾಧೀನ ಮಾಡಿಕೊಂಡ ಆಸ್ತಿಯ ದಾಖಲೆಗಳು ರೈತರ ಹೆಸರಿಗೆ ಬರುತ್ತಿದೆ. ಜತೆಗೆ ಹೆದ್ದಾರಿಗೆ ಭೂಸ್ವಾಧೀನವಾಗಿ ವರ್ಷಗಳೇ ಕಳೆದರೂ ಕೆಲ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಜತೆಗೆ ಗ್ರಾಮದ ಹೆದ್ದಾರಿಯಲ್ಲಿ ವರ್ಷಕ್ಕೆ 25ಕ್ಕೂ ಹೆಚ್ಚು ಮಂದಿ ರಸ್ತೆ ದಾಟುವಾಗ ಅಪಘಾತವಾಗಿ ಮೃತಪಡುತ್ತಿದ್ದಾರೆ. ಅಂಡರ್ ಪಾಸ್ ಹಾಗೂ ಸ್ಕೈವಾಕ್ ಜತೆಗೆ ಹಂಪ್ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದರು.

ಶಾಲೆಗೆ ತೊಂದರೆ ಆಗದಿರಲಿ: ಜಾಸ್‌ಟೋಲ್, ಟಿ.ಬೇಗೂರು, ದೊಡ್ಡೇರಿ, ಕುಲುವನಹಳ್ಳಿ, ಹನುಮಂತಪುರ ಕ್ರಾಸ್, ಬಿಲ್ಲಿನಕೋಟೆ ಸೇರಿ ತಾಲೂಕಿನ ಗಡಿ ಗ್ರಾಮದ ನಿಜಗಲ್‌ವರೆಗೂ ಹೆದ್ದಾರಿಯನ್ನು ವಿ.ಸೋಮಣ್ಣ ಪರಿಶೀಲಿಸಿದರು. ಜತೆಗೆ ಬಿಲ್ಲಿನಕೋಟೆ ಸರ್ಕಾರಿ ಶಾಲೆಯನ್ನು ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನ ಮಾಡಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ, ಶಾಲೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ನೀಡಿದರು.

ಅದ್ದೂರಿ ಸ್ವಾಗತ: ನಗರದ ಜಾಸ್ ಟೋಲ್ ಬಳಿ ವಿ.ಸೋಮಣ್ಣ ಅವರನ್ನು ತಾಲೂಕು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು. ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ, ಮಾಜಿ ಸದಸ್ಯ ರಮೇಶ್, ಬಿಜೆಪಿ ರೈತಮೊರ್ಚಾ ಜಿಲ್ಲಾಧ್ಯಕ್ಷ ಬೃಂಗೀಶ್, ಮಹಿಳಾ ಮೋರ್ಚಾ ಅದ್ಯಕ್ಷೆ ಮಂಜುಳಾ ಸುರೇಶ್, ಮುಖಂಡ ರವಿ, ರಂಗನಾಥ್, ರಾಜಮ್ಮಪ್ರಕಾಶ್ ಇದ್ದರು.

ಜಮೀರ್‌ಗೆ ತಿರುಗೇಟು: ಕೇಂದ್ರ ಸಚಿವ ಕುಮಾರಸ್ವಾಮಿ ಕರಿಯ ಎಂಬ ಸಚಿವ ಜಮೀರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಜಮೀರ್ ಅವರಿಗೆ ಮುಂದಿನ ದಿನಗಳಲ್ಲಿ ಆ ಸಮುದಾಯವರೇ ಬುದ್ಧಿ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು. ಮಂತ್ರಿಯಾದವರಿಗೆ ಸಂಸ್ಕಾರ ಹಾಗೂ ಹಿರಿಯರು ಎಂಬ ಗೌರವ ನೀಡಬೇಕು. ಬಸ್ ಮಾಲೀಕ ಜಮೀರ್‌ನನ್ನು ರಾಜಕೀಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ದೇವೇಗೌಡರು, ಕುಮಾರಸ್ವಾಮಿ. ಎಚ್‌ಡಿಕೆ ಇಲ್ಲದಿದ್ದರೆ ಜಮೀರ್ ಬಸ್ ಇಟ್ಟುಕೊಂಡೇ ಇರಬೇಕಿತ್ತು. ರಾಷ್ಟ್ರದ ನಾಯಕರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.

ನಿಖಿಲ್‌ಕುಮಾರ್ ಗೆಲುವು ಖಚಿತ: ರಾಜ್ಯ ಉಪಚುನಾವಣೆಯಲ್ಲಿ ಇಡೀ ದೇಶವೇ ಚನ್ನಪಟ್ಟಣದತ್ತ ಮುಖ ಮಾಡಿದೆ. ನಾನೂ ರಾಮನಗರ ಜಿಲ್ಲೆಯವನ್ನಾಗಿದ್ದು, ನಾಲ್ಕೈದು ದಿನ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. 32 ಗ್ರಾಮ ಪಂಚಾಯಿತಿ, 31 ನಗರಸಭೆ ವಾರ್ಡ್ ಸೇರಿ 2,33,861ಮಂದಿ ಮತದಾರರಿದ್ದು, ಎನ್‌ಡಿಎ ಅಭ್ಯರ್ಥಿ ನಿಖಿಲ್‌ಕುಮಾರ್ ಬಹುಮತದಿಂದ ಗೆಲ್ಲುತ್ತಾರೆ ಎಂದು ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

4 ಪಥ ರೈಲ್ವೆ ಮಾರ್ಗ: ದಾಬಸ್‌ಪೇಟೆ, ವಸಂತನರಸಾಪುರ ಹಾಗೂ ಶಿರಾ ಏಷ್ಯಾ ಖಂಡದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶವನ್ನು ಹೊಂದಿದ್ದು, ಬೆಂಗಳೂರು-ತುಮಕೂರು ರೈಲ್ವೆ ಮಾರ್ಗಕ್ಕೆ 4 ಪಥ ನಿರ್ಮಾಣ ಮಾಡುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿ.ಸೋಮಣ್ಣ ಮಾಹಿತಿ ನೀಡಿದರು.

ಮಾಜಿ ಸಂಸದ ಭೇಟಿ: ಬೆಂಗಳೂರಿನಿಂದ ಬಾಗಲಕೋಟೆಗೆ ಸಂಚರಿಸುತ್ತಿದ್ದ ಬಿಜೆಪಿ ಮಾಜಿ ಸಂಸದ ಬಿ.ಸಿ.ಗದ್ದಿಗೌಡರ್ ಅವರು ಮಾರ್ಗಮಧ್ಯೆ ಕುಲುವನಹಳ್ಳಿ ಬಳಿಯ ರಾ.ಹೆದ್ದಾರಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸುತ್ತಿದ್ದಾಗ ಭೇಟಿ ನೀಡಿ ಕುಶಲೋಪರಿ ನಡೆಸಿದರು.

9 ವರ್ಷಕ್ಕೆ ಕೇವಲ ಶೇ.440 ಅಭಿವೃದ್ಧಿ: ತುಮಕೂರು-ಬೆಂಗಳೂರು 6 ಪಥ ಹೆದ್ದಾರಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು 2048 ಕೋಟಿ ರೂಪಾಯಿ ಅನುದಾನ ಹಾಗೂ ರಸ್ತೆ ಅಭಿವೃದ್ಧಿಗೆ 844ಕೋಟಿ ರೂ. ಅನುದಾನ ಕೇಂದ್ರ ಸರ್ಕಾರದಿಂದ ಮಂಜೂರಾಗಿದೆ ಎಂದು ಕೇಂದ್ರ ಮಂತ್ರಿ ವಿ.ಸೋಮಣ್ಣ ತಿಳಿಸಿದರು. 2015ರಲ್ಲಿ ಆರಂಭಗೊಂಡ ಕಾಮಗಾರಿ ಮುಕ್ತಾಯಗೊಳ್ಳದೆ ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. 9 ವರ್ಷಕ್ಕೆ ಕೇವಲ ಶೇ.44 ಅಭಿವೃದ್ಧಿ ಕಂಡಿದೆ. ಈ ರಸ್ತೆಯಲ್ಲಿ ನಿತ್ಯ ನಾನೂ ಸಂಚಾರ ಮಾಡುತ್ತಿದ್ದು, ಈ ರಸ್ತೆಯಲ್ಲಿ ನಡೆಯುವ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ. ಭೂಸ್ವಾಧೀನದಿಂದ ಕಾಮಗಾರಿ ವಿಳಂಬವಾಗಿದ್ದು, ಹೆದ್ದಾರಿಯಲ್ಲಿ ಎಂಟು ಕಡೆ ಭೂಸ್ವಾಧೀನ ವಿಚಾರವಾಗಿ ತೊಂದರೆಯಾಗಿದೆ. ಹೆದ್ದಾರಿ ಅಪಘಾತದಲ್ಲಿ ವರ್ಷಕ್ಕೆ ನೂರಾರು ಮಂದಿ ಮೃತಪಡುತ್ತಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದು, ಅಲ್ಲಿ ಅಂಡರ್ ಪಾಸ್, ಸ್ಕೈವಾಕ್ ನಿರ್ಮಾಣ ಕುರಿತು ಕ್ರಮಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net