ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸುವರ್ಣ ಕರ್ನಾಟಕ ಕಾರಿಡಾರ್ (ಬಿಎಂಐಸಿ) ಹೆಸರಿನಲ್ಲಿ ಕೆಐಎಡಿಬಿಂದ ಪ್ರಾರಂಭಿಸಿರುವ ಧಾರವಾಡ ತಾಲೂಕಿನ 14 ಹಳ್ಳಿಗಳ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹಿಸಿ ಭೂಮಿ ಉಳಿಸಿ ಹೋರಾಟ ಸಮಿತಿ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಟನೆಯಿಂದ (ಎಐಕೆಕೆಎಂಎಸ್) ನಗರದಲ್ಲಿ ಸೋಮವಾರ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ತಾಲೂಕಿನ 14 ಗ್ರಾಮಗಳ ರೈತರ ಭೂಮಿಯನ್ನು ಸುವರ್ಣ ಕರ್ನಾಟಕ ಕಾರಿಡಾರ್ ಸಲುವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಿ ರೈತರಿಗೆ ನೋಟಿಸ್ ನೀಡಲಾಗಿದೆ. ಈಗಾಗಲೇ ಜಿಪಿಎಸ್ ಸಹ ಮಾಡಲಾಗಿದ್ದು, ಇದು ರೈತರಲ್ಲಿ ಆತಂಕ ಮೂಡಿಸಿದೆ. ನೀರಾವರಿ ಮೂಲಗಳಾದ ಬೋರ್‌ವೆಲ್, ಹಳ್ಳ ಮತ್ತು ಕೆರೆ ನೀರಿನಿಂದ ಕಬ್ಬು, ಭತ್ತ, ಗೋವಿನಜೋಳ, ತರಕಾರಿ ಬೆಳೆಯುತ್ತಿದ್ದಾರೆ. ತೋಟಗಾರಿಕೆ ಗಿಡಮರಗಳು, ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲದೆ, ಜಮೀನುಗಳಲ್ಲಿ ದನಕರುಗಳ ಸಾಕಾಣಿಕೆಗಾಗಿ ಫಾರ್ಮ್‌ಹೌಸ್ ಮತ್ತು ದನದ ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಏಕಾಏಕಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿರುವುದರಿಂದ ರೈತ ಕುಟುಂಬಗಳು ದುಡಿಮೆಯಿಂದ ವಂಚಿತವಾಗಲಿವೆ. ಕೂಡಲೇ ಭೂಸ್ವಾದೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದರು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಶರಣು ಗೋನವಾರ, ಬಸವರಾಜ ಭೋಸ್ಲೆ ಮಾತನಾಡಿದರು. ಗುಳೇದಕೊಪ್ಪ, ಕಲ್ಲಾಪೂರ, ಮದಿಕೂಪ್ಪ, ಶಿಂಗನಹಳ್ಳಿ, ವೆಂಕಟಪೂರ, ಕುಮ್ಮನಾಯಕನಕೊಪ್ಪ, ಹಳೇತೇಗೂರ, ವೀರಾಪೂರ, ರಾಮಾಪೂರ, ವರಹನಾಗಲಾವಿ, ಇತರ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net