

ಚನ್ನರಾಯಪಟ್ಟಣ: ಹೋಬಳಿಯಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟದ ಅನಿರ್ಧಿಷ್ಟಾವಧಿ ಧರಣಿಯ 52ನೇ ದಿನವಾದ ಬುಧವಾರ ನವ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ್, ಧರಣಿಯ 50ನೇ ದಿನದ ಸಂದರ್ಭದಲ್ಲಿ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ರೈತರ ಜತೆಗಿರುವುದು ನಮ್ಮ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ನಾನು ಮಹಾರಾಷ್ಟ್ರ ಗಡಿಭಾಗದವನಾದರೂ ಭೂಮಿ ಉಳಿಸುವ ಹೋರಾಟವನ್ನು ಬೆಂಬಲಿಸುತ್ತೇನೆ. ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಭೂಮಿ ಉಳಿಸುವಂತೆ ಮನವಿ ಮಾಡೋಣ ಎಂದರು.
ಸರ್ಕಾರವು ಈ ಕಾಯ್ದೆಯ ಮೂಲಕ ರೈತರ ಭೂಮಿಯನ್ನು ಕೊಳ್ಳೆಹೊಡೆದು ರೈತರ ಬದುಕನ್ನು ಕಸಿದುಕೊಳ್ಳುತ್ತಿದೆ. ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರಿಗೆ ಕೈಗಾರಿಕೆಗಳಲ್ಲಿ ಕೆಲಸ ನೀಡುತ್ತೇವೆ ಎಂದು ಭರವಸೆ ನೀಡಿದ ಸರ್ಕಾರ ಎಷ್ಟು ಕಾರ್ಮಿಕರಿಗೆ ಕೆಲಸ ನೀಡಿದೆ? ಮೊದಲು ಉದ್ಯೋಗ ಸೃಷ್ಟಿಯತ್ತ ಗಮನಹರಿಸಿ. ಭೂಮಿ ಕಸಿದುಕೊಳ್ಳು ಯೋಚನೆ ಕೈಬಿಡಿ ಎಂದು ಆಗ್ರಹಿಸಿದರು.
ಕಾರಹಳ್ಳಿ ಶೀನಿವಾಸ್ ಮಾತನಾಡಿ, ಕಲಬುರಗಿಯಿಂದ ಬಂದು ನವಕರ್ನಾಟಕ ರೈತ ಸಂಘದ ದಯಾನಂದ ಪಾಟೀಲ ಅವರು ಬೆಂಬಲ ಸೂಚಿಸಿದ್ದಾರೆ. ಬ್ರಿಟಿಷ್ ಸರ್ಕಾರ ನಮ್ಮನ್ನು ಸುಮಾರು ವರ್ಷ ಆಳ್ವಿಕೆ ಮಾಡಿ ಎಲ್ಲ ದೋಚಿ ತುಂಡು ಭೂಮಿಯನ್ನಾದರೂ ಬಿಟ್ಟಿದ್ದರು. ಆದರೆ ಈಗಿನ ಸರ್ಕಾರಗಳು ನಮ್ಮಭೂಮಿಯನ್ನ ಬೇರೆಯವರಿಗೆ ಮಾರಿ ನಮ್ಮನ್ನು ಬೀದಿಪಾಲಾಗಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷ ಮಂಜುನಾಥ ಮಾತನಾಡಿ, ಪಂಚಾಯತಿಯ ವತಿಯಿಂದ ಕೂಡ ರೈತರ ಈ ಹೋರಾಟದ ಜತೆಗಿದ್ದೇವೆ ಎಂದರು.
ಮುಖಂಡ ಮಾರೇಗೌಡರು, ರೈತರಾದ ಮುನಿರಾಜ್, ದೇವರಾಜ್, ನಂಜೇಗೌಡ, ಗೋಪಾಲಪ್ಪ, ಪುನೀತ್, ನಂಜಣ್ಣ, ಮುಕುಂದ, ನಾರಾಯಣಮ್ಮ, ವೆಂಕಟೇಶ್ ಮತ್ತಿತರರಿದ್ದರು.