

ತುಮಕೂರು: ಜಿಲ್ಲೆಯ ಕುಡಿಯುವ ನೀರಿನ, ಮಹತ್ವದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಅಗತ್ಯವಾದ ಭೂಸ್ವಾಧಿನ ಪ್ರಕ್ರಿಯೆಗೆ ವೇಗ ನೀಡಲು ತೆಗೆದುಕೊಂಡ ದಿಟ್ಟಕ್ರಮಗಳಿಗೆ ಡಿಸಿ ಶುಭಕಲ್ಯಾಣ್ ಅವರಿಗೆ ಐಎಸ್ಡಿಎ ಇನಾಕಾನ್ ನ್ಯಾಷನಲ್ ಅವಾರ್ಡ್ಸ್ &2025 ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ.
ಕುಂಟುತ್ತಾ ಸಾಗುತ್ತಿರುವ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಅವಶ್ಯಕವಾಗಿ ಬೇಕಾದ 1335 ಎಕರೆ ಭೂಮಿ ಸ್ವಾಧಿನಪಡಿಸಿಕೊಂಡಿದ್ದು, ಸಂತ್ರಸ್ತರಿಗೆ 365 ಕೋಟಿ ರೂಪಾಯಿ ಪರಿಹಾರ ಹಣವನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಭೂ-ಮಾಲೀಕರಿಗೆ ಪಾರದರ್ಶಕವಾಗಿ ಪಾವತಿಸಿ ಭೂ ಸ್ವಾಧಿನಕ್ಕೆ ಶುಭಕಲ್ಯಾಣ್ ಹೆಚ್ಚಿನ ಒತ್ತು ನೀಡಿರುತ್ತಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 75ಕ್ಕೂ ಹೆಚ್ಚು ಪರಿಶೀಲನಾ ಸಭೆಗಳನ್ನು ಕೈಗೊಂಡು, ಭೂಸ್ವಾಧಿನ ಪ್ರಕ್ರಿಯೆಗೆ ವೇಗ ನೀಡಿದ್ದಲ್ಲದೆ, ಎಲ್ಲ ತಾಲೂಕುಗಳಲ್ಲಿ ದಾಖಲೆ ಶುದ್ಧೀಕರಣ ಶಿಬಿರಗಳನ್ನು ನಡೆಸಿ ಎತ್ತಿನಹೊಳೆ ಯೋಜನೆ ಕಾಮಗಾರಿ ಚುರುಕು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ತಾಂತ್ರಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮ್ವಯತೆಸಾಧಿಸಿ ತಾಲೂಕು ಮಟ್ಟದ ಸಭೆಗಳನ್ನು ನಡೆಸಿ ಎಲ್ಲ ಅಡೆತಡೆಗಳನ್ನು ನಿವಾರಿಸಿರುತ್ತಾರೆ.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಎತ್ತಿನಹೊಳೆ ಯೋಜನೆಯ ಪ್ರಮುಖ ಹಂತವಾದ ಭೂಸ್ವಾಧಿನ ಪ್ರಕ್ರಿಯೆ ಪೂರ್ಣ ಗೊಳಿಸಿರುವುದರಿಂದ ಜಿಲ್ಲೆಗೆ ಸುಮಾರು 5 ಟಿಎಂಸಿ ನೀರಿನ ಲಾಭ ದೊರೆಯಲಿದೆ. ಸಮಗ್ರ ಹಾಗೂ ಪರಿಣಾಮಕಾರಿಯಾಗಿ ಆಡಳಿತಾತ್ಮಕ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದ ಸೇವೆಯನ್ನು ಪರಿಗಣಿಸಿ ಐಎಸ್ಡಿಎ ಸಂಸ್ಥೆ ವತಿಯಿಂದ ಆಯೋಜಿಸಲಾದ ಇನಾಕಾನ್ ನ್ಯಾಷನಲ್ ಅವಾರ್ಡ್ಸ್&2025 ಸಮಾರಂಭದಲ್ಲಿ
ಶನಿವಾರ ಮೂಲ ಸೌಲಭ್ಯಗಳ ಅಧಿವೃದ್ಧಿ, ಕೃಷಿ ಸ್ಥಿರತೆ ಹಾಗೂ ಜಿಲ್ಲೆಯ ನಾಗರಿಕರ ಕಲ್ಯಾಣಕ್ಕಾಗಿ ಶ್ರಮಿಸಿದ್ದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ಜಿಲ್ಲಾಧಿಕಾರಿ ಶುಭಕಲ್ಯಾಣ್ಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.