

ಕೋಲಾರ: ಭೂಸುಧಾರಣಾ ಕಾಯ್ದೆ 1961 ತಿದ್ದುಪಡಿ ಸೇರಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಎಲ್ಲ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಜೆಡಿಎಸ್ ಜಿಲ್ಲಾ ಸಮಿತಿಯಿಂದ ನಗರದ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಡಿಸಿ ಸಿ. ಸತ್ಯಭಾಮಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಕಳೆದೊಂದು ವರ್ಷದ ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿಕಾರ್ಯ ನಡೆಸಿಲ್ಲ. ಕರೊನಾ ಸಂದರ್ಭದಲ್ಲಿ ರೈತರು, ಕಾರ್ಮಿಕರು ಬೀದಿಗಿಳಿಯಲು ಸಾಧ್ಯವಾಗದಿರುವುದನ್ನು ಮನಗಂಡ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಜಾರಿಗೆ ಮುಂದಾಗಿದೆ. ಕರೊನಾ ಸಂಕಷ್ಟದಲ್ಲಿ ಸಿಲುಕಿರುವ ರೈತರು, ಕಾರ್ಮಿಕರನ್ನು ಬೀದಿಗೆ ತರುವ ಕೆಲಸ ಆಗುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಮಾತನಾಡಿ, ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿರುವ ಐಫೋನ್ ಘಟಕದಲ್ಲಿ ಉದ್ಯೋಗಾವಕಾಶ ವಿಚಾರದಲ್ಲಿ ಲೋಪದೋಷಗಳಾಗುತ್ತಿರುವ ಬಗ್ಗೆ ದೂರು ವ್ಯಕ್ತವಾಗಿದೆ. ಸರೋಜಿನಿ ಮಹಿಷಿ ವರದಿ ಪ್ರಕಾರ ಶೇ.90 ಉದ್ಯೋಗವನ್ನು ಜಿಲ್ಲೆಯವರಿಗೆ ಕಲ್ಪಿಸಬೇಕು, ಹೊರ ಭಾಗದವರಿಗೆ ಕಲ್ಪಿಸಿದ್ದೇ ಆದಲ್ಲಿ ಜೆಡಿಎಸ್‌ನಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಶಾಸಕರಾದ ಕೆ.ಶ್ರೀನಿವಾಸಗೌಡ, ಗೋವಿಂದರಾಜು, ಮಾಜಿ ಎಮ್ಮೆಲ್ಸಿ ತೂಪಲ್ಲಿ ಆರ್.ಚೌಡರೆಡ್ಡಿ, ಜಿಪಂ ಸದಸ್ಯರಾದ ಕಿತ್ತಂಡೂರು ನಂಜುಂಡಪ್ಪ, ತೂಪಲ್ಲಿ ನಾರಾಯಣಸ್ವಾಮಿ, ತಾಪಂ ಸದಸ್ಯರಾದ ಗೋಪಾಲಗೌಡ, ಮುದುವಾಡಿ ಮಂಜುನಾಥ್, ಮುಖಂಡರಾದ ಮೂರಾಂಡಹಳ್ಳಿ ಗೋಪಾಲಪ್ಪ, ಬಣಕನಹಳ್ಳಿ ನಟರಾಜ್, ವಕ್ಕಲೇರಿ ರಾಮು, ಮಲ್ಲೇಶ್ ಬಾಬು, ತಾಲೂಕು ಅಧ್ಯಕ್ಷ ಬಾಬುಮೌನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ. ದಯಾನಂದ್ ಪಾಲ್ಗೊಂಡಿದ್ದರು.