

ಶನಿವಾರಸಂತೆ: ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಸೋಮವಾರ ವಿಶ್ವ ಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣಾ ಕೃಷ್ಣಾನಂದ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಆಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿನ ಪ್ಲಾಸ್ಟಿಕ್, ರಬ್ಬರ್ ಮುಂತಾದ ಘನ ತ್ಯಾಜ್ಯಗಳನ್ನು ತೆರವು ಮಾಡಿದರು. ನಂತರ ಪ್ಲಾಸ್ಟಿಕ್ ಮುಂತಾದ ಘನ ತ್ಯಾಜ್ಯಗಳನ್ನು ನಾಶಪಡಿಸಿದರು.
ಭೂಮಿಯಲ್ಲಿ ಬಿದ್ದ ಪ್ಲಾಸ್ಟಿಕ್, ರಬ್ಬರ್ ಮುಂತಾದ ತ್ಯಾಜ್ಯವಸ್ತುಗಳು ಕರಗುವುದಿಲ್ಲ. ಮಣ್ಣಿನೊಳಗೆ ಇಂಥಹ ಘನ ತ್ಯಾಜ್ಯಗಳು ಸೇರಿಕೊಳ್ಳುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣಾ ಕೃಷ್ಣಾನಂದ್ ಮಾತನಾಡಿ, ನಾವೆಲ್ಲರೂ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ನಾವು ಭೂಮಿ ತಾಯಿಯ ಮಕ್ಕಳು. ನಾವು ಭೂಮಿ ಮೇಲೆ ಜೀವನ ನಡೆಸುತ್ತಿರುವುದರಿಂದ ಭೂಮಿ ನಮ್ಮನ್ನು ಕಾಪಾಡುತ್ತಿದೆ. ಹೀಗಿರುವಾಗ ನಾವು ಭೂಮಿಯ ಸ್ವಚ್ಛತೆ ಕಾಪಾಡುವುದು ಮುಖ್ಯ ಎಂದರು.
ಭೂಮಿಯಲ್ಲಿ ಪ್ಲಾಸ್ಟಿಕ್, ರಬ್ಬರ್, ಮುಂತಾದ ತ್ಯಾಜ್ಯಗಳನ್ನು ಬಿಸಾಡುವುದು, ಮರ, ಗಿಡಗಳನ್ನು ಕಡಿಯುವುದು, ಪರಿಸರ ನಾಶ ಮಾಡುವುದು ಶೋಷಣೆ. ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಭೂಮಿ ದಿನವನ್ನು ಆಚರಿಸುವಂತಾಗಬೇಕು ಎಂದರು
ಶ್ರಮದಾನ ಕಾರ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಡಿ.ಪ್ರವೀಣ್‌ಕುಮಾರ್ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿಯರು ಇದ್ದರು.