

ಹಾಸನ: ಅರಣ್ಯ ನಾಶ, ಪರಿಸರ ಮಾಲಿನ್ಯ, ಹವಾಮಾನ ಏರಿಕೆ, ಪ್ರಕೃತಿ ವಿಕೋಪಗಳಂತಹ ಬಹುದೊಡ್ಡ ಸಮಸ್ಯೆಗಳು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವ ಸಂದರ್ಭದಲ್ಲಿ ವಿಶ್ವ ಭೂ ದಿನಾಚರಣೆ ಬಹಳ ಮಹತ್ವದ್ದಾಗಿದೆ. ಭೂಮಿಯ ಸಂರಕ್ಷಣೆ ಜಗತ್ತಿನ ಅತಿ ತುರ್ತಾಗಿದೆ ಎಂದು ಸಾಹಿತಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಏಕಲವ್ಯ ರೋವರ್ ಮುಕ್ತದಳ ಸಂಯುಕ್ತಾಶ್ರಯದಲ್ಲಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆಯಲ್ಲಿ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ಮಾನವನ ಅವಶ್ಯಕತೆಗಳನ್ನು ಈಡೇರಿಸುತ್ತದೆಯೇ ಹೊರತು ದುರಾಸೆಗಳನ್ನಲ್ಲ. ಭೂಮಿಯ ಮೇಲಿನ ಸಕಲ ಜೀವಜಂತುಗಳು ಉತ್ತಮ ರೀತಿಯಲ್ಲಿ ಬದುಕಬೇಕಾದರೆ ಇಲ್ಲಿನ ಪ್ರಕೃತಿ ಬಹಳ ಮುಖ್ಯ. ಪ್ರಕೃತಿಯನ್ನು ಉಳಿಸಿ, ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ವಿಶ್ವ ಭೂದಿನ ಕೇವಲ ಏಪ್ರಿಲ್ ಮಾಹೆಗಷ್ಟೇ ಸೀಮಿತಗೊಳ್ಳದೇ ವರ್ಷವಿಡೀ ಜಾಗೃತಿಯನ್ನು ಮೂಡಿಸುವಂತಾಗಬೇಕು. ಈ ಮೂಲಕ ಜಗತ್ತನ್ನು ಉತ್ತಮೀಕರಿಸಲು ಒಂದು ಅವಕಾಶ ದೊರಕಿದಂತಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಹ ಪ್ರಕೃತಿಯ ಉಳಿವಿಗಾಗಿ ಕಾರ್ಯೋನ್ಮುಖರಾಗಬೇಕಿದೆ. ಭೂಮಾಲಿನ್ಯವನ್ನು ನಿಯಂತ್ರಣಗೊಳಿಸಬೇಕಿದೆ. ಭೂಮಿತಾಯಿಗೆ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸುವ ಮೂಲಕ ಹಸಿರುಡುಗೆಯನ್ನು ತೊಡಿಸಬೇಕಿದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ ಮಾತನಾಡಿ, ಪರಿಸರ ವ್ಯವಸ್ಥೆಗಳು ನಮಗೆ ಶುದ್ಧ ಗಾಳಿ, ನೀರು, ಮತ್ತು ವೈವಿದ್ಯಮಯ ಸಸ್ಯ ಹಾಗೂ ಪ್ರಾಣಿಗಳ ಜೀವನಗಳನ್ನು ವ್ಯವಸ್ಥಿತ ರೂಪದಲ್ಲಿ ಕೊಂಡೊಯ್ಯುತ್ತದೆ. ನಮ್ಮಂತೆ ಭೂಮಿಯ ಆರೋಗ್ಯವೂ ಸಹ ಬಹಳ ಮುಖ್ಯ. ಭೂಮಿಗೆ ಆದ ಮಾಲಿನ್ಯ, ಗಣಿಗಾರಿಕೆ, ಮರುಭೂಮಿಕರಣ, ಅರಣ್ಯ ನಾಶ ಹೀಗೆ ಅನೇಕ ಸಮಸ್ಯೆಗಳಿಂದ ಭೂತಾಯಿಯನ್ನು ನಾವು ನೀವೆಲ್ಲಾ ಸಂರಕ್ಷಿಸಬೇಕಿದೆ ಎಂದರು.
ಏಕಲವ್ಯ ರೋರ್ಸ್ ಮುಕ್ತದಳದ ನಾಯಕ ಆರ್.ಜಿ.ಗಿರೀಶ್‌ಮಾತನಾಡಿ, ಯುವಜನರು ಪರಿಸರ ಕಾಳಜಿ ಹೊಂದಲು ವಿಶ್ವ ಭೂ ದಿನ ಒಂದು ಉತ್ತಮ ಅವಕಾಶವಿದೆ. ನಮ್ಮ ಭವಿಷ್ಯವನ್ನು ನಾವು ಸುಂದರವಾಗಿಟ್ಟುಕೊಳ್ಳಬೇಕಾದರೆ ಪ್ರಕೃತಿಯ ಸೊಬಗನ್ನು ವೃದ್ಧಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್, ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ಮಹಿಳಾ ಕಾರ್ಯದರ್ಶಿ ಪದ್ಮಾವತಿ ವೆಂಕಟೇಶ್, ಸಮಾಜ ಸೇವಕಿ ಭಾನುಮತಿ, ಕವಯಿತ್ರಿ ಗಿರಿಜಾ ನಿರ್ವಾಣಿ, ಪೋಷಕ ರಾಮಭದ್ರಯ್ಯ, ಪ್ರಿಯಾಂಕ ಸೇರಿದಂತೆ ಶಿಬಿರಾರ್ಥಿಗಳು ಹಾಜರಿದ್ದರು.