ಭೂಮಿಪೂಜೆಯಾದರೂ ಆರಂಭಗೊಳ್ಳದ ಕಾಮಗಾರಿ

IMG20230305142515
Published on

ತಿ.ನರಸೀಪುರ: ಪುರಸಭೆ ವ್ಯಾಪ್ತಿಯ ಹಲವು ರಸ್ತೆಗಳಿಗೆ ನಗರೋತ್ಥಾನ 3ನೇ ಹಂತದ ಅನುದಾನ ಮೀಸಲಿಟ್ಟು, ಭೂಮಿಪೂಜೆ ನಡೆದರೂ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಭಗವಾನ್ ವೃತ್ತ, ಭಗವಾನ್ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಭಗವಾನ್ ವೃತ್ತದಿಂದ ಅರಣ್ಯ ಇಲಾಖೆಯ ರಸ್ತೆ ಮತ್ತು ತಾಲೂಕು ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿ 766ರ ತನಕ ಬಾಕಿ ರಸ್ತೆಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿ 2022-23ನೇ ಸಾಲಿನ ನಗರೋತ್ಥಾನ ಯೋಜನೆಯ 9.37 ಕೋಟಿ ರೂ. ಅನುದಾನದಡಿ ಶಾಸಕರಾದ ಎಂ. ಅಶ್ವಿನ್‌ಕುಮಾರ್ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಕಳೆದ ತಿಂಗಳಷ್ಟೇ ಭೂಮಿಪೂಜೆ ಮಾಡಿದ್ದರು. ಆದರೆ ಇದುವರೆಗೂ ಕಾಮಗಾರಿ ಪ್ರಾಂಭವಾಗದೆ, ರಸ್ತೆ ದುಸ್ಥಿತಿ ಹಾಗೆಯೇ ಮುಂದುವರಿದಿದೆ.

ಈ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲು ಹರಸಾಹಸ ಪಡಬೇಕಿದೆ. ಈ ಭಾಗದ ರಸ್ತೆಗಳಲ್ಲಿ ಹಳ್ಳಕೊಳ್ಳ ಮತ್ತು ಗುಂಡಿಗಳು ಹೆಚ್ಚು ಇರುವುದರಿಂದ ಜನರು ಮತ್ತು ವಾಹನಗಳು ಓಡಾಡಲು ತುಂಬ ಕಷ್ಟಕರವಾಗಿದ್ದು, ವಾಹನ ಚಾಲಕರು ಆಗಾಗ್ಗೆ ಬಿದ್ದು ಗಾಯ ಮಾಡಿಕೊಂಡ ನಿದರ್ಶನ ಸಾಕಷ್ಟಿವೆ.

ಗುಂಡಿಮಯ ರಸ್ತೆಗಳು: ಈ ರಸ್ತೆಗಳಲ್ಲದೆ ಸಿಡಿಪಿಒ ಕಚೇರಿಯ ರಸ್ತೆ , ಸಾರ್ವಜನಿಕ ಆಸ್ಪತ್ರೆ ರಸ್ತೆ, ಹೊಸ ತಿರುಮಕೂಡಲು ಮುಖ್ಯರಸ್ತೆಗಳು ಗುಂಡಿಮಯವಾಗಿದ್ದು, ಬಹುಕಾಲದಿಂದ ರಸ್ತೆಗಳ ದುರಸ್ತಿ ಕಾರ್ಯ ನಡೆದಿಲ್ಲ. ರಸ್ತೆಗಳು ಸರಿಯಿಲ್ಲದ ಕಾರಣ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ದಿನಗಳು ಹತ್ತಿರವಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಇದರ ಹಿಂದಿರುವ ಷಡ್ಯಂತ್ರವಾದರೂ ಏನು ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.

ಪಟ್ಟಣ ಪಂಚಾಯಿತಿಯಿಂದ ಮೇಲ್ದರ್ಜೆಗೇರಿ ನಾಲ್ಕೂವರೆ ವರ್ಷಗಳು ಕಳೆದಿದ್ದರೂ ಪುರಸಭೆ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿ ಮಾಡದೆ ಇರುವುದು ದುರದೃಷ್ಟಕರ. ಕಳೆದ ಐದು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಇದ್ದು ಅದನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿದಾಗ ಆಲುಗೂಡು, ಹೆಳವರಹುಂಡಿ ಹಾಗೂ ಬನ್ನಳ್ಳಿ ಈ ಮೂರೂ ಬಡಾವಣೆ ಪುರಸಭೆ ವ್ಯಾಪ್ತಿಗೆ ಒಳಪಟ್ಟವು. ಕುಡಿಯುವ ನೀರಿನ ಬೇಡಿಕೆ ಹೆಚ್ಚಾದ್ದರಿಂದ ಕಾವೇರಿ ನದಿಯಿಂದ ಪಟ್ಟಣದ ಎಲ್ಲ 23 ವಾರ್ಡ್‌ಗಳಿಗೂ 24/7 ಯೋಜನೆ ಅಡಿಯಲ್ಲಿ ಸಂಪೂರ್ಣ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗಿನ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಸುಮಾರು 65 ಕೋಟಿ ರೂ. ಬಿಡುಗಡೆ ಮಾಡಲಾಯಿತು.

ಆದರೆ ಕುಡಿಯುವ ನೀರಿನ ಯೋಜನೆ ಅಡಿ ಎಲ್ಲ ವಾರ್ಡ್‌ಗಳಿಗೂ ಪೈಪ್‌ಲೈನ್ ಅಳವಡಿಸಲು ಸಿಸಿ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸಿ ಆ ಗುಂಡಿಗಳನ್ನೂ ಮುಚ್ಚಿಲ್ಲ. ಹಾಗಾಗಿ ಎಲ್ಲ ಬಡಾವಣೆಗಳಲ್ಲೂ ರಸ್ತೆ ಮಧ್ಯದಲ್ಲೇ ಗುಂಡಿಗಳಿದ್ದು ಅದನ್ನು ಸರಿಪಡಿಸುವ ಹೊಣೆ ಪುರಸಭೆಗೆ ಸೇರಿದ್ದು ಯಾರೂ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಲ್ಲದೆ, ಈಗಾಗಲೇ ಪ್ರತಿಯೊಂದು ಬಡಾವಣೆಗಳಿಗೂ ನೀರು ಸರಬರಾಜಾಗುತ್ತಿದ್ದು, ಅಗೆದಿರುವ ರಸ್ತೆಗೆ ಪ್ರತ್ಯೇಕವಾಗಿ ಹಣ ಬಿಡುಗಡೆಯಾಗಿದೆ. ಆದರೆ ಅದನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿಲ್ಲ ಮತ್ತು ತಿರುಮಕೂಡಲು ಚೌಡಯ್ಯ ವೃತ್ತದಿಂದ-ಅಗಸ್ಟೇಶ್ವರಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಂತೂ ಸಂಪೂರ್ಣವಾಗಿ ಹದಗೆಟ್ಟಿದ್ದು ಪ್ರತಿನಿತ್ಯ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಸಂಗಮಕ್ಕೆ ಆಗಮಿಸುವ ಭಕ್ತರಿಗಂತು ಕಿರಿಕಿರಿ ಹೇಳುತೀರದಾಗಿದೆ. ಒಟ್ಟಾರೆ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿದ್ದರೂ ಪಟ್ಟಣ ಅಭಿವೃದ್ಧಿ ಕಂಡಿಲ್ಲ.

ಪಕ್ಕದ ಮುದ್ದಬೀರನಹುಂಡಿ 12ನೇ ವಾರ್ಡಿಗೆ ಸೇರಿದ್ದು, ಅಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ಅಳವಡಿಸಲು ಸಂಪೂರ್ಣವಾಗಿ ಮುಖ್ಯರಸ್ತೆಯನ್ನು ಅಗೆದು ಬಿಟ್ಟಿದ್ದು ಸುಮಾರು ಎರಡು ವರ್ಷಗಳಿಂದ ಇಲ್ಲಿ ಓಡಾಡಲು ಸಮಸ್ಯೆ ಆಗಿರುವ ಬಗ್ಗೆ ದೂರು ಬಂದಿದೆ.

ಪಟ್ಟಣದ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆನ್ನುವ ನಿಟ್ಟಿನಲ್ಲಿ ಸರ್ಕಾರದ ಜತೆ ಚರ್ಚಿಸಿ ಅನುದಾನ ತಂದಿರುವುದು ಪಟ್ಟಣ ಸಂಪೂರ್ಣ ಅಭಿವೃದ್ಧಿ ಮಾಡುವ ಉದ್ದೇಶದಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಇದರ ಬಗ್ಗೆ ಸಾರ್ವಜನಿಕರು ಮತ್ತು ಕೆಲ ಪುರಸಭೆ ಸದಸ್ಯರು ನನ್ನ ಗಮನಕ್ಕೆ ತಂದಿದ್ದು ಗುತ್ತಿಗೆದಾರ ಮತ್ತು ಅಧಿಕಾರಿಗಳನ್ನು ಕರೆದು ಮಾತನಾಡಿದ್ದೇನೆ. ಈಗಾಗಲೇ ಕಾಮಗಾರಿ ಪ್ರಾರಂಭಿಸಲು ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಈ ಕೂಡಲೇ ಕಾಮಗಾರಿ ಪ್ರಾರಂಭ ಮಾಡಲು ನಿರ್ದೇಶನ ನೀಡಿದ್ದೇನೆ. ಪಟ್ಟಣವನ್ನು ಸಂಪೂರ್ಣ ಗುಂಡಿ ಮುಕ್ತ ಮಾಡುವುದು ನಮ್ಮ ಗುರಿ.
ಎಂ.ಅಶ್ವಿನ್ ಕುಮಾರ್ , ಶಾಸಕ

ತಿ.ನರಸೀಪುರದ ಲಿಂಕ್ ರಸ್ತೆ, ಮಾರ್ಕೆಟ್ ರಸ್ತೆಗಳಲ್ಲಿ ಫುಟ್ಬಾತ್ ವ್ಯಾಪಾರಿಗಳು ರಸ್ತೆಗಳ ಮೇಲೆಲ್ಲ ತುಳ್ಳುವ ಗಾಡಿ ಹಾಗೂ ಶೆಡ್ಡು ಹಾಕಿಕೊಂಡಿದ್ದರು. ಹಾಗಾಗಿ ಅವುಗಳನ್ನು ತೆರವುಗೊಳಿಸಿ ಕಾಮಗಾರಿ ಪ್ರಾರಂಭವಾಗುವುದು ಸ್ವಲ್ಪ ವಿಳಂಬವಾಯಿತು. ಈಗಾಗಲೇ ಕಾಮಗಾರಿ ಪ್ರಾರಂಭ ಮಾಡಲು ನಾವು ಮತ್ತು ಶಾಸಕರು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ. ಕಾಮಗಾರಿ ತಣದಲ್ಲಿ ಪ್ರಾರಂಭ ಮಾಡುತ್ತೇವೆ.
ಟಿ.ಎಂ.ನಂಜುಂಡಸ್ವಾಮಿ, ಅಧ್ಯಕ್ಷರು, ಪುರಸಭೆ, ತಿ.ನರಸೀಪುರ

ಪಟ್ಟಣದ ಹೃದಯ ಭಾಗದಲ್ಲಿರುವ ರಸ್ತೆಗಳ ನಿರ್ಮಾಣ ಮಾಡಬೇಕೆನ್ನುವುದು ಪಟ್ಟಣದ ಎಲ್ಲ ಜನರ ಆಶಯ. ಆದರೆ,ಕಾಮಗಾರಿ ಇನ್ನೂ ಪ್ರಾರಂಭಸದೆ ಇರುವುದಕ್ಕೆ ಪುರಸಭೆ ಆಡಳಿತ ಮತ್ತು ಶಾಸಕದ್ವಯರ ನಿರ್ಲಕ್ಷ್ಯವೇ ಪ್ರಮುಖ ಕಾರಣ.
ತೋಟದಪ್ಪ ಬಸವರಾಜು , ತಿ.ನರಸೀಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net