

ಶೃಂಗೇರಿ: ಅಚ್ಚ ಅಂಬಲಿ, ಹಾಲು ಅಂಬಲಿ, ಬಣ್ಣದ ಸೌತೆಕಾಯಿ, ಬೇಲಿ ಮೇಲಿನ ದಾರೆ ಹೀರೆಕಾಯಿ, ನೂರ ಒಂದು ಕುಡಿ ಭೂಮಿತಾಯಿಗೆ ಬೈಕೆ ಬೈಕೆ ಎಂದು ಭಕ್ತಿಯಿಂದ ಹಾಡುತ್ತ ತಾಲೂಕಿನ ರೈತರು ಮಂಗಳವಾರ ಬೆಳಗಿನಜಾವ ಭೂತಾಯಿಗೆ ಪೂಜೆ ಸಲ್ಲಿಸಿದರು.
ಭೂಮಿ ಹುಣ್ಣಿಮೆ ಹಬ್ಬ ಆಚರಣೆಗೆ ಸೋಮವಾರ ಭರ್ಜರಿ ತಯಾರಿಯಲ್ಲಿ ತೊಡಗಿದ್ದ ಕೃಷಿಕರು ಬುಧವಾರ ಬೆಳಗಿನಜಾವ ಗದ್ದೆಯಲ್ಲಿ ತೆಂಗಿನಕಾಯಿ, ವಿವಿಧ ಹೂ, ಅರಿಶಿಣ ಕುಂಕುಮ, ಹಾಲು ಮುಂತಾದ ಪೂಜಾ ಸಾಮಗ್ರಿಗಳನ್ನು ಇರಿಸಿ ಶಂಖನಾದ, ಜಾಗಟೆ,ಪಟಾಕಿ ಸಿಡಿಸಿ ಪೂಜೆ ನೆರವೇರಿಸಿದರು. ಹಲವಾರು ಜಾತಿ ಮರಗಿಡಗಳ ಸೊಪ್ಪು ಸೇರಿಸಿ ತಯಾರಿಸಿದ ಬೆರಕೆ ಸೊಪ್ಪಿನ ಪಲ್ಯ, ಬೆಲ್ಲ ಹಾಕಿ ಗೆಣಸು ಬೇಯಿಸಿ ತಯಾರಿಸಿದ ಸಿಹಿಪದಾರ್ಥ, ಪಾಯಸ, ಬಣ್ಣದಸೌತೆಕಾಯಿ ಪಲ್ಯ, ಚೀನಿಕಾಯಿ ಕಡಬು, ಸೋರೆಕಾಯಿ ಕಡಬು, ಸಾರು, ಅನ್ನ ಹೀಗೆ ವಿಶೇಷವಾಗಿ ತಯಾರಿಸಿದ ಅಡುಗೆಯನ್ನು ಸಾಗುವಾಳಿ ಗದ್ದೆಯಲ್ಲಿರಿಸಿ ಉತ್ತಮ ಸಲು ನೀಡಿ ನಮ್ಮನ್ನು ಕಾಪಾಡು ತಾಯಿ ಎಂದು ಕುಟುಂಬಸ್ಥರು ಪ್ರಾರ್ಥನೆ ಸಲ್ಲಿಸಿದರು.