ಭೂಮಿ ಹಕ್ಕಿಗಾಗಿ 17ಕ್ಕೆ ಸಮಾವೇಶ

Kumar samathala
Published on

ಚಿತ್ರದುರ್ಗ: ತಾಲೂಕಿನ ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಬೇಕೆಂದು ಸರ್ಕಾರ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜ. 17ರಂದು ಜಿಲ್ಲಾಧಿಕಾರಿ ಕಚೇರಿ ಸಮೀಪ ಸಾಗುವಳಿದಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಈ ಸಮಸ್ಯೆ ಇದೆ. ಅರ್ಹರೆಲ್ಲರಿಗೂ ಹಕ್ಕುಪತ್ರ ನೀಡಬೇಕೆಂದು ಆಯಾ ತಾಲೂಕು ಕೇಂದ್ರದಿಂದಲೇ ಸರ್ಕಾರಕ್ಕೆ ಆಗ್ರಹಿಸಿ ಸಮಾವೇಶ ಆಯೋಜಿಸುತ್ತಿದ್ದೇವೆ. ಸ್ಥಳೀಯ ಶಾಸಕರು, ವಿವಿಧ ಸಂಘಟನೆಗಳ ಮುಖಂಡರು, ಸಾಗುವಳಿದಾರರನ್ನು ಆಹ್ವಾನಿಸಿದ್ದೇವೆ ಎಂದರು.

ಹಕ್ಕುಪತ್ರಕ್ಕಾಗಿ ಜಿಲ್ಲಾದ್ಯಂತ 1.2 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿ ಪರಿಗಣಿಸಬೇಕು. ಅರಣ್ಯ, ಕಂದಾಯ ಇಲಾಖೆ ವ್ಯಾಪ್ತಿಯ ಭೂಮಿ ಸೇರಿ ಕೆಲ ಗೊಂದಲ ನಿವಾರಣೆಗಾಗಿ ಮೇ 18ರಂದು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ, ಹಕ್ಕುಪತ್ರ ವಿತರಿಸುವಂತೆ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಪ್ರತಿ ವಾರಕ್ಕೊಮ್ಮೆ ತಹಸೀಲ್ದಾರ್ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಈವರೆಗೂ ಸಭೆಗಳೇ ನಡೆದಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರಿ ಅಥವಾ ಇತರೆ ಭೂಮಿಗಳಲ್ಲಿ ಸಾಗುವಳಿ ಮಾಡುತ್ತ ಫಾರಂ ನಂ 50, 53, 57ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಭೂಮಿ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.

94 ಸಿ, 94 ಸಿಸಿ ಅರ್ಜಿಗಳನ್ವಯ ವಸತಿಗಾಗಿ ಅರ್ಜಿ ಸಲ್ಲಿಸಿದ ಅರ್ಹರೆಲ್ಲರಿಗೂ ಹಾಗೂ ವಸತಿ ರಹಿತರಿಗೆ ನಿವೇಶನ ಮತ್ತು ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲು ಕ್ರಮವಹಿಸಬೇಕು. ಒತ್ತುವರಿ ಹೆಸರಿನಲ್ಲಿ ಒಕ್ಕಲೆಬ್ಬಿಸಬಾರದು ಎಂದು ಕೋರಿದರು.

ಸಮಿತಿಯ ಮುಖಂಡರಾದ ಸತ್ಯಪ್ಪ ಮಲ್ಲಾಪುರ, ಹನುಮಂತಣ್ಣ ಗೋನೂರು, ಕರಿಯಪ್ಪ ಈಚಘಟ್ಟ, ಈರಜ್ಜ, ಸುನಂದಮ್ಮ, ಎಚ್.ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net