ಭೂಮಿ, ವಸತಿ ಸೌಲಭ್ಯಕ್ಕೆ ಆಗ್ರಹ

Pressmeet
Published on

ಚಿತ್ರದುರ್ಗ: ಅಲೆಮಾರಿ, ಅರೆಅಲೆಮಾರಿ ಸಮುದಾಯಗಳು ತೀವ್ರ ಸಂಕಷ್ಟದಲ್ಲಿದ್ದು, ಈವರೆಗೂ ಆಳ್ವಿಕೆ ನಡೆಸಿರುವ ಎಲ್ಲ ಸರ್ಕಾರಗಳು ನಿರ್ಲಕ್ಷಿಸಿವೆ ಎಂದು ಅಲೆಮಾರಿ ಸಂಘಟನೆ ಅಧ್ಯಕ್ಷ ಕೆ.ಎಂ.ನಾಗರಾಜು ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಡುಗಾಡು ಸಿದ್ಧ, ಬುಡಗಜಂಗಮ, ಸಿಳ್ಳೆಕ್ಯಾತ, ಚನ್ನದಾಸ, ಹಂದಿಜೋಗಿ, ಕೊರಚ, ಕೊರಮ ಸೇರಿ ಇನ್ನಿತರೆ ಸಮುದಾಯದವರಿಗೆ ಎಲ್ಲಿಯೂ ಸ್ವಂತ ನೆಲೆ ಇಲ್ಲ. ಊರಿಂದೂರಿಗೆ ಅಲೆದು, ಜೀವನ ನಿರ್ವಹಿಸಲಾಗುತ್ತಿದೆ. ಯಾವುದೇ ಸೌಲಭ್ಯಗಳಿಲ್ಲದೆ, ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ರಾಜ್ಯ ಸರ್ಕಾರ 2016-17ರಲ್ಲಿ ಅಲೆಮಾರಿ ಕೋಶವನ್ನು ರಚಿಸಿ 102 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿತ್ತು. 72 ಜಾತಿಗಳ ಜೊತೆಗೆ ಕೊರಚ, ಕೊರಮ ಸಮುದಾಯ ಸೇರಿಸಿತೆ ವಿನಾ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹೆಚ್ಚಿಸಲಿಲ್ಲ. ಬದಲಿಗೆ ಕಡಿತಗೊಳಿಸಲಾಗಿದೆ. ರಾಜ್ಯದಲ್ಲಿ 3.5 ಲಕ್ಷದಷ್ಟು ಅಲೆಮಾರಿಗಳಿದ್ದು, ಭೂಮಿ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಶಾಂತಿ ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಈ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿವೆ. ರಾಜಕೀಯ ಸ್ಥಾನಮಾನವೂ ಇಲ್ಲದ ಕಾರಣ ಸೌಲಭ್ಯಗಳಿಂದ ವಂಚಿತವಾಗಿವೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 50 ಸಾವಿರಕ್ಕೂ ಹೆಚ್ಚು ಮಂದಿ ಇದ್ದರೂ ಎಲ್ಲಿಯೂ ಸ್ವಂತ ಸೂರಿಲ್ಲ ಎಂದು ಬೇಸರಿಸಿದರು.

ಕಳೆದ ವರ್ಷ ಸ್ಥಾಪನೆಯಾಗಿರುವ ಅಲೆಮಾರಿ ನಿಗಮಕ್ಕೆ ಪ್ರತಿ ವರ್ಷ 500 ಕೋಟಿ ರೂ. ಅನುದಾನ, ಸ್ವಂತ ವ್ಯಾಪಾರ ಕೈಗೊಳ್ಳಲು ಸರ್ಕಾರ ಅಗತ್ಯ ಸೌಲಭ್ಯ, ನಿಗಮಗಳಿಗೆ ಸಮುದಾಯದವರಿಗೆ ಆದ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಕೊರಚ ಸಮುದಾಯದ ಅಧ್ಯಕ್ಷ ವೈ.ಕುಮಾರ್ ಮಾತನಾಡಿ, 2011 ರ ಜಾತಿಗಣತಿಯನ್ನು ಮಾನದಂಡವಾಗಿ ಇಟ್ಟುಕೊಂಡು ರಾಜ್ಯ
ಸರ್ಕಾರ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯದವರನ್ನು ವಂಚಿಸುತ್ತ ಬರುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸಿಎಂ ಸಿದ್ದರಾಮಯ್ಯ ಜಾತಿಗಣತಿ ಮುಚ್ಚಿಡದೆ, ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಒಳಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಭೂ ಒಡೆತನ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈ ಸಮುದಾಯಗಳ ಜನರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಮುಖಂಡರಾದ ಜಿ.ಕೃಷ್ಣಪ್ಪ, ಅರುಣ್‌ಸಾಗರ್, ಮಾರಿಕಾಂಬ ಕೃಷ್ಣಪ್ಪ, ತಿಪ್ಪೇಸ್ವಾಮಿ ಸಂಪಿಗೆ ಒತ್ತಾಯಿಸಿದರು.

ಚನ್ನದಾಸ ಸಮುದಾಯದ ಅಧ್ಯಕ್ಷ ರಂಗಪ್ಪ, ಜಯಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net