

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಲೇಮಲ್ಲೆನಹಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6.18 ಎಕರೆ ಭೂಮಿ ವಶಪಡಿಸಿಕೊಳ್ಳಲು ರಾಜಕಾರಣಿಗಳು, ಉದ್ಯಮಿಗಳು ಮುಂದಾಗಿದ್ದಾರೆ ಎಂಬ ಗ್ರಾಮಸ್ಥರ ಆರೋಪದ ಮೇರೆಗೆ ಜಿಲ್ಲಾಧಿಕಾರಿ ಎನ್.ಶಿವಶಂಕರ್ ಬುಧವಾರ ಸ್ಥಳ ಪರಿಶೀಲಿಸಿದರು.
ಗ್ರಾಮದ 6.18 ಎಕರೆಯನ್ನು ಜಮೀನಿನ ಪಕ್ಕದ ಭೂಮಾಲೀಕರ ಕುಟುಂಬ ವಶಪಡಿಸಿಕೊಂಡು ಉದ್ಯಮಿಗಳಿಗೆ ಮಾರಾಟ ಮಾಡಲು ಹೊರಟಿದೆ ಎಂದು ಗ್ರಾಮಸ್ಥರು ಆಪಾದಿಸಿದ ಹಿನ್ನೆಲೆಯಲ್ಲಿ ಇಒ ಶ್ರೀನಾಥಗೌಡ ಪಿಡಿಒ ಗಂಗರಾಜು ಜತೆಯಲ್ಲಿ ಡಿಸಿ ಪರಿಶೀಲನೆ ನಡೆಸಿದರು.
ಬಂಡೆ ಇರುವ ಜಾಗ ಹಾಗೂ ಹಳೆಯ ಗ್ರಾಮದ ವಿವಾದಿತ 6.18 ಎಕರೆ ಜಾಗ ಪರಿಶೀಲಿಸಿದ ಜಿಲ್ಲಾಧಿಕಾರಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದರು.
ನಾನು ನಿಮ್ಮನ್ನು ಜಾಗ ಖಾಲಿ ಮಾಡಿಸಲು ಬಂದಿಲ್ಲ. ನೀವು ಈಗಿರುವ ಜಾಗದಲ್ಲಿಯೇ ಇರಲು ಬಯಸುವುದಾದರೆ ಅದರ ಪಟ್ಟಿ ತಯಾರಿಸಿ, ಆಧಾರ್ ಕಾರ್ಡ್ ಹಾಗೂ ನಿವಾಸಿಗಳ ದಾಖಲೆ ಸಹಿತ ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿಮಗೆ ಯಾವ ಒಂದು ಜಾಗ ಬೇಕೆಂದು ನಿರ್ಧರಿಸಿ ಎಂದು ಡಿಸಿ ಹೇಳಿದರು. ಗ್ರಾಮದ ಹಲವರು ನಮಗೆ ಹಳೆಯ ಊರು ಬೇಕು, ಈಗಿರುವ ಗೋಮಾಳ ಜಮೀನಿನ ಮನೆಗಳು ಉಳಿಯಬೇಕು ಎಂದರು. ಜಿಲ್ಲಾಧಿಕಾರಿ ಪರಿಶೀಲನೆಗೂ ಮುನ್ನ ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಆಗ ನೀರು ನಿಲ್ಲುವಂತೆ ಮಾಡಿದರು!: 1972ರಲ್ಲಿ ಶಾಸಕರಾಗಿದ್ದವರು ಇಲ್ಲಿ ನೂರಾರು ಎಕರೆ ಜಮೀನು ಮಾಡಿಕೊಂಡರು. ಈ ಜಮೀನಿಗೆ ಹೊಂದಿಕೊಂಡಂತೆ ಇದ್ದ ಎಸ್ಟಿ ಸಮುದಾಯದ ಗುಡಿಸಲು ವಾಸಿಗಳಿಗೆ ತೊಂದರೆ ಮಾಡುವ ಸಲುವಾಗಿ ನೀರು ನಿಲ್ಲುವಂತೆ ಮಾಡಿದರು. ಆಗ ಈ ಜಾಗ ತೊರೆದು ಇಲ್ಲಿಗೆ ಸಮೀಪದ ಬಂಡೆಯ ಮೇಲೆ ಸರ್ಕಾರಿ ಗೋಮಾಳ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡತೊಡಗಿದೆವು. ನಂತರ ಆ ಗ್ರಾಮ ಪಾಳು ಬಿತ್ತು. ಕೊನೆಗೆ ಈ ಬಗ್ಗೆ ಕೋರ್ಟ್ ಮೊರೆ ಹೋದೆವು. ಗ್ರಾಮದವರಿಗೆ ಭೂಮಿ ಬಿಡುವಂತೆ 2012ರಲ್ಲಿ ಕೋರ್ಟ್ ಆದೇಶಿಸಿತು. ಆದರೆ 2005ರಲ್ಲಿ ಮತ್ತೆ ನಮಗೆ ಅಧಿಕಾರಿಗಳು ಅದಲು-ಬದಲು ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಲೇ ಬಂದರೂ ನಾವು ಜಗ್ಗಲಿಲ್ಲ. ಈಗ ಅಧಿಕಾರಿಗಳು ಬಂದು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಗ್ರಾಮದ ತಿಮ್ಮ ರಾಮಯಪ್ಪ.
ನಮಗೆ ನಮ್ಮ ಊರು ಬೇಕು: ನಾವು ಸಾಗುವಳಿ ಚೀಟಿಗೆ 1972ರಲ್ಲೇ ಅರ್ಜಿ ಹಾಕಿಕೊಂಡಿದ್ದೆವು. ಇಲ್ಲಿ 375 ಎಕರೆ ಗೋಮಾಳ ಇತ್ತು ಆಗ.ಅವರು ಬಂದು ನಮ್ಮನ್ನು ನೀರು ಹರಿಸಿ ಬೆದರಿಸಿ, ಈ ಗ್ರಾಮದಿಂದ ಬಂಡೆ ಕಡೆಗೆ ಓಡಿಸಿದರು. ಈಗ ನಾವು 50 ಕುಟುಂಬದವರಿದ್ದೇವೆ. ನಮಗೆ ನಮ್ಮ ಊರು ಬೇಕು. ಬಂಡೆ ಜಾಗದಲ್ಲಿ ನೀರಿಲ್ಲ, ಸ್ಮಶಾನ, ಗುಂಡುತೋಪು, ಕೆರೆ ರಸ್ತೆ ಇಲ್ಲ. ಅಧಿಕಾರಿಗಳು ಅದಲು, ಬದಲು ಪತ್ರ ತಯಾರಿಸಿಕೊಂಡು ನಮ್ಮ ಸಹಿ ಮಾಡಿಸಿಕೊಳ್ಳಲು ಬಂದಿದ್ದರು. ನಾವು ಒಪ್ಪದ ಕಾರಣ ಈಗ ಜಿಲ್ಲಾಧಿಕಾರಿ ಬಂದಿದ್ದಾರೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರಾಶ್ರಿತರ ಸಂಘದ ನಾಗರಾಜು ಆಪಾದಿಸಿದರು.