

ರಾಯಚೂರು: ಭೂಮಿ ಮತ್ತು ವಸತಿ ಹಕ್ಕಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಸರ್ಕಾರಗಳು ನಿರ್ಲಕ್ಷೃ ವಹಿಸುತ್ತಾ ಬಂದಿದ್ದು, ಭೂಮಿ ಮತ್ತು ವಸತಿ ಹಕ್ಕಿಗಾಗಿ ಬೆಂಗಳೂರಿನಲ್ಲಿ ಆ.14ರಂದು ಬರಿ ಹೊಟ್ಟೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ಹಿಂದೆ ದಿವಂಗತ ದೊರೆಸ್ವಾಮಿ ನೇತೃತ್ವದಲ್ಲಿ ನಡೆದ ಹೋರಾಟ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಅದಾದ ನಂತರ ಈವರೆಗೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ ಎಂದು ದೂರಿದರು.
ಕಳೆದ ಬಾರಿ ದೊರೆಸ್ವಾಮಿಯವರಿಗೆ ಸರ್ಕಾರ ನೀಡಿದ ಭರವಸೆ ಈಡೇರಿಸಲು ಕೂಡಲೇ ಮತ್ತೊಮ್ಮೆ ಹೋರಾಟಗಾರರ ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಸಿದ್ದರಾಮಯ್ಯನವರು ಅಂದು ಸಾಗುವಳಿ ಭೂಮಿ ಸಕ್ರಮಕ್ಕೆ ಾರಂ 57 ಸಲ್ಲಿಸಲು ಅವಕಾಶ ನೀಡಿದ್ದರು. ಆದರೆ ನಂತರ ನಿಂತು ಹೋಯಿತು.
ಹಲವು ವರ್ಷಗಳಿಂದ ಭೂಮಿ, ವಸತಿ ಇಲ್ಲದವರಿಗೆ ಸೌಕರ್ಯ ಕಲ್ಪಿಸಲು ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ನಿರ್ಲಕ್ಷ್ಯಿಸುತ್ತಾ ಬಂದಿವೆ. ಇಲ್ಲಿಯವರಗೆ ಕಾದು ಸಾಕಾಗಿದ್ದು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮುಂದಾಗುತ್ತಿದ್ದು, 10 ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾರೆಪ್ಪ ಹರವಿ ತಿಳಿಸಿದರು.
ಮುಖಂಡ ಎಂ.ಆರ್.ಭೇರಿ ಮಾತನಾಡಿ, 45 ವರ್ಷಗಳಿಂದ ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕು ನೀಡದೆ ಸರ್ಕಾರಗಳು ಕಡೆಗಣಿಸುತ್ತ ಬಂದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯ ಹಾಗೂ ಸರ್ಕಾರಿ ಭೂಮಿ ಉಳುಮೆ ಮಾಡುವರರಿಗೆ ಭೂಮಿ ಹಕ್ಕು ನೀಡಬೇಕು.
ನಗರ ಪ್ರದೇಶದಲ್ಲಿ 94 ಮತ್ತು 94ಸಿಸಿ ಅರ್ಜಿ ಹಾಕಿದವರಿಗೆ ನಿವೇಶನ ನೀಡುವುದು ಸೇರಿ ಹಸಿದವರಿಗೆ ಅನ್ನಭಾಗ್ಯ ನೀಡಿದಂತೆ ಭೂಮಿ ಇಲ್ಲದವರಿಗೆ ಭೂಮಿ ಗ್ಯಾರಂಟಿ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠೀಯಲ್ಲಿ ಸಮಿತಿ ಪದಾಧಿಕಾರಿಗಳಾದ ಭೀಮಣ್ಣ ನಗನೂರು, ಖಾಜಾ ಅಸ್ಲಂ ಅಹ್ಮದ್, ಆಂಜಿನೇಯ ಕುರುಬದೊಡ್ಡಿ, ಹನುಮಂತಪ್ಪ , ನರಸಿಂಹಲು ಉಪಸ್ಥಿತರಿದ್ದರು.