

ಚಿತ್ರದುರ್ಗ: ಭೂಮಿ-ವಸತಿ ಇಲ್ಲದ ಬಡವರಿಗೆ, ಅವರ ಜೀವನಾಧಾರವಾಗಿರುವ ತುಂಡು ಭೂಮಿಯ ಮೇಲೆ ತ್ವರಿತ ಹಕ್ಕು ಮಂಜೂರಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ಸಂಜೆ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಮದಕರಿನಾಯಕ ವೃತ್ತ, ರಂಗಯ್ಯನಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ, ಎಸ್‌ಬಿಐ, ಒನಕೆ ಓಬವ್ವ ವೃತ್ತ ಸೇರಿ ಇನ್ನಿತರೆಡೆ ಸಂಚರಿಸಿತು.
ಭೂಮಿ-ವಸತಿ ಮಂಜೂರಾತಿ ಪ್ರಕ್ರಿಯೆ ತ್ವರಿತಗೊಳಿಸಲು ಹೋರಾಟಗಾರರನ್ನೂ ಒಳಗೊಂಡ ಉನ್ನತ ಮಟ್ಟದ ಸಮಿತಿ ಮರು ರಚಿಸಿ ಕಾರ್ಯೋನ್ಮುಖರಾಗಬೇಕು. ಕೂಡಲೇ ನಮೂನೆ 50, 53, 57ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂಮಿಗಳನ್ನು ಪಂಚನಾಮೆ, ಜಿಪಿಎಸ್ ಸರ್ವೇ ನಡೆಸಬೇಕು. 94‘ಸಿ’ ಮತ್ತು 94‘ಸಿಸಿ’ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಹಕ್ಕುಪತ್ರ ನೀಡಲು ಸತ್ಕಾರ ಯೋಜನೆ ರೂಪಿಸಬೇಕು ಎಂದು ಶಾಸಕರಿಗೆ ಒತ್ತಾಯಿಸಿ, ಮೆರವಣಿಗೆ ನಡೆಸಿದರು.
ದಶಕಗಳಿಂದ ಉಳುಮೆ ಮಾಡುತ್ತ ಬಂದಿರುವ ಬಡವರಿಗೆ ಹಕ್ಕುಪತ್ರ ನೀಡುವಲ್ಲಿ ಸರ್ಕಾರವೇ ವಿಳಂಬ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತ ಅರ್ಜಿ ಸಲ್ಲಿಸಿರುವ ಭೂ ರಹಿತರೆಲ್ಲರಿಗೂ ಭೂಮಿ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.
ಅರಣ್ಯ-ಕಂದಾಯ ಭೂಮಿಗಳ ಜಂಟಿ ಸರ್ವೇ ನಡೆಸಬೇಕು. ಅರಣ್ಯ ಹಕ್ಕು ಕಾಯ್ದೆಯನ್ನು ಗೌರವಿಸಿ ಜಾರಿಗೊಳಿಸಬೇಕು. ಸ್ವಾತಂತ್ರ್ಯ ಬಂದು 7 ದಶಕಗಳಾದರೂ ನೆಲೆ ಇಲ್ಲದೆ, ಅಲೆಯುತ್ತಿರುವ ಅಲೆಮಾರಿ ಸಮುದಾಯಗಳಿಗೆ ಆದ್ಯತೆಯ ಮೇಲೆ ವಸತಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.