ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ರೈತರು?

1
Published on

ಜಗನ್ನಾಥ್​ ಕಾಳೇನಹಳ್ಳಿ ತುಮಕೂರು

ಚೆನ್ನೆ-ಬೆಂಗಳೂರು ಇಂಡಸ್ಟ್ರಿಯಲ್​ ಕಾರಿಡಾರ್​ (ಸಿಬಿಐಸಿ) ವ್ಯಾಪ್ತಿಯಡಿ ರಚನೆ ಆಗಿರುವ ತುಮಕೂರು ಸ್ಥಳಿಯ ಯೋಜನಾ ಪ್ರಾಧಿಕಾರದಿಂದಾಗಿ ಶಿರಾ ಹಾಗೂ ತುಮಕೂರು ತಾಲೂಕಿನ 123 ಹಳ್ಳಿಗಳಲ್ಲಿ ಅಭಿವೃದ್ಧಿ ಹೆಸರಲ್ಲಿ ಭೂಸ್ವಾಧಿನ ಪ್ರಕ್ರಿಯೆ ನಡೆಯಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕಾಗಿ ಈಗಾಗಲೇ ತುಮಕೂರು, ಕೊರಟಗೆರೆ, ಶಿರಾ ತಾಲೂಕಿಗೆ ಹೊಂದಿಕೊಂಡಂತೆ 12500 ಎಕರೆ ಜಮೀನು ಭೂಸ್ವಾಧಿನಪಡಿಸಿಕೊಳ್ಳಲಾಗಿದೆ. 1 ರಿಂದ 6ನೇ ಹಂತದವರೆಗೆ ಹಂತ, ಹಂತವಾಗಿ ಭೂಸ್ವಾಧಿನ ಪಕ್ರಿಯೆ ಮೂಲಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕೈಗೊಳ್ಳಲಾಗಿದೆ. ಈಗ ಮತ್ತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೈಗಾರಿಕೆ ವಲಯ ವಿಸ್ತರಣೆ ನೆಪದಲ್ಲಿ 10 ಸಾವಿರ ಎಕರೆ ಭೂಸ್ವಾಧಿನಕ್ಕೆ ಚಾಲನೆ ನೀಡಿರುವುದು ರೈತರಿಗೆ ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ.

123 ಹಳ್ಳಿಗಳಲ್ಲಿ ಭೀತಿ: "ಚೆನ್ನೆ&ಬೆಂಗಳೂರು ಇಂಡಸ್ಟ್ರಿಯಲ್​ ಕಾರಿಡಾರ್​' ತುಮಕೂರು ಸ್ಥಳಿಯ ಯೋಜನಾ ಪ್ರದೇಶದಡಿ ಪ್ರತ್ಯೇಕ ಪ್ರಾಧಿಕಾರ ರಚಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆ ಪತ್ರ ಹೊರಬೀಳುತ್ತಿದ್ದಂತೆ ಕಳೆದೊಂದು ವಾರದಿಂದ ಈ ಭಾಗದ ಗ್ರಾಮಸ್ಥರು, ರೈತರಲ್ಲಿ ಸಹಜವಾಗಿ ಆತಂಕ ಮನೆಮಾಡಿದೆ.

ಈ ಪ್ರಾಧಿಕಾರ ವ್ಯಾಪ್ತಿಯಡಿ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ 12 ಗ್ರಾಮ, ಕಸಬಾ ಹೋಬಳಿಯ 2, ತುಮಕೂರು ತಾಲೂಕು ಬೆಳ್ಳಾವಿ ಹೋಬಳಿಯ 35 ಹಳ್ಳಿಗಳು, ಕೋರಾ ಹೋಬಳಿಯ 74 ಗ್ರಾಮಗಳು ಒಳಗೊಂಡಂತೆ ಒಟ್ಟು 123 ಹಳ್ಳಿಗಳು ಬರಲಿದ್ದು, ಒಟ್ಟು 35677 ಹೆಕ್ಟೇರ್​ ಪ್ರದೇಶ ವಿಸ್ತೀರ್ಣ ಒಳಗೊಂಡಿದೆ. ಸದ್ಯ ಇಂಡಸ್ಟ್ರಿಯಲ್​ ಕಾರಿಡಾರ್​ ತುಮಕೂರು ಸ್ಥಳಿಯ ಯೋಜನಾ ಪ್ರದೇಶದ ಮಹಾಯೋಜನೆ ತಯಾರಾಗುವವರೆಗೆ ಶಿರಾ ಸ್ಥಳಿಯ ಯೋಜನಾ ಪ್ರದೇಶದ ಚಾಲ್ತಿಯಲ್ಲಿರುವ ನಿಯಾಮವಳಿಗಳನ್ನೇ ಅಳವಡಿಸಿಕೊಳ್ಳಲಾಗಿದೆ.

ಏರ್​ಪೋರ್ಟ್​ಗೆ ಭೂ ಸ್ವಾಧಿನ: ಕೈಗಾರಿಕೆ ವಲಯ ವಿಸ್ತರಣೆ ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ 10 ಸಾವಿರ ಎಕರೆಗೂ ಹೆಚ್ಚು ಪ್ರದೇಶವನ್ನು ಭೂಸ್ವಾಧಿನಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಒಂದು ವಿಮಾನ ನಿಲ್ದಾಣದಿಂದ ಇನ್ನೊಂದು ವಿಮಾನ ನಿಲ್ದಾಣಕ್ಕೆ 100 ಕಿ.ಮೀ., ಅಂತರ ಇರಬೇಕು. ಆದರೆ, ಈ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿ ಸ್ವಾಧಿನ ಪಡಿಸಿಕೊಳ್ಳುತ್ತಿರುವುದು ಅವೈಜ್ಞಾನಿಕ ಎನಿಸಿದೆ ಎಂಬ ಚರ್ಚೆಯು ಕೈಗಾರಿಕೋದ್ಯಮಿಗಳ ವಲಯದಲ್ಲಿ ಈಗ ಶುರುವಾಗಿದೆ.

ನನ್ನ ಅವಧಿಯಲ್ಲಿ ಚೆನ್ನೆ&ಚಿತ್ರದುರ್ಗ ಕಾರಿಡಾರ್​ ೂಷಿಸಲಾಗಿತ್ತು. ಜನರ ಆತಂಕ ಸಹಜ. ಭೂಸ್ವಾಧಿನಕ್ಕೆ ಹಣದ ಲಭ್ಯತೆ ಇಲ್ಲದ ಕಾರಣ ಭೂಸ್ವಾಧಿನ ಭೀತಿಗೊಳಗಾಗಬೇಕಿಲ್ಲ. ಚೆನ್ನೆ&ಬೆಂಗಳೂರು ಇಂಡಸ್ಟ್ರಿಯಲ್​ ಕಾರಿಡಾರ್​ ಯೋಜನಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಭೂ ಪರಿವರ್ತನೆ, ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗುತ್ತದೆ. ಭವಿಷ್ಯದ ಯೋಜನೆಗಳನ್ನು ಇದರಡಿ ರೂಪಿಸಲಾಗುವುದು. ಶಿರಾದಲ್ಲಿ ಈಗಾಗಲೇ 9500 ಎಕರೆ ಭೂಮಿ ಸ್ವಾಧಿನಪಡಿಸಿಕೊಳ್ಳಲಾಗಿದ್ದು ಕಳ್ಳಂಬೆಳ್ಳ ಹಳ್ಳಿಗಳು ಸೇರಿವೆ. ಸಹಜವಾಗಿ ಜನರಲ್ಲಿ ಭೂಸ್ವಾಧಿನ ಆತಂಕ ಎದುರಾಗಿದೆ. ಆದರೆ, ಅಭಿವೃದ್ಧಿ ಹೆಸರಲ್ಲಿ ಭೂಮಿ ಕಳೆದುಕೊಳ್ಳುವ ಭೀತಿ ಜನರಿಗಿದ್ದು ಪ್ರಾಧಿಕಾರ ಈ ಬಗ್ಗೆ ಸ್ಪಷ್ಟಪಡಿಸಬೇಕು. > ಮಲ್ಲಿಕಾರ್ಜುನ್​, ಗ್ರಾಪಂ ಮಾಜಿ ಸದಸ್ಯ, ಮೆಳೇಹಳ್ಳಿ ತುಮಕೂರು, ಶಿರಾ, ತಿಪಟೂರು ನಗರಾಭಿವೃದ್ಧಿ ಪ್ರಾಧಿಕಾರಗಳಂತೆ ಚೆನ್ನೆ-ಬೆಂಗಳೂರು ಇಂಡಸ್ಟ್ರಿಯಲ್​ ಕಾರಿಡಾರ್​ ಪ್ರಾಧಿಕಾರ ರಚನೆ ಆಗಿದೆ. ಜನರಿಗೆ ಯಾವುದೇ ರೀತಿಯಲ್ಲೂ ಭೂಮಿ ಕಳೆದುಕೊಳ್ಳುವ ಆತಂಕ ಬೇಡ. ಟೌನ್​ಶಿಪ್​ ಅಭಿವೃದ್ಧಿಗೆ ಕೆಐಎಡಿಬಿ ಅಡಿ 8 ಸಾವಿರ ಎಕರೆ ಭೂಮಿ ಸ್ವಾಧಿನಪಡಿಸಿಕೊಳ್ಳುವ ಯೋಜನೆ ಇದ್ದು ಅಷ್ಟು ಮಾತ್ರ ಭೂಸ್ವಾಧಿನ ಮಾಡಿಕೊಳ್ಳಲಾಗುವುದು. ಉಳಿದಂತೆ ಅಭಿವೃದ್ಧಿ ಯೋಜನೆ ರೂಪಿಸುವುದು ಪ್ರಾಧಿಕಾರದ ಕೆಲಸ. > ಹರ್ಷ, ಜಂಟಿ ನಿರ್ದೇಶಕ, ಸಿಬಿಐಸಿ ಯೋಜನಾ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net