ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯ ಪರಿಹಾರ ನೀಡಿ

bkt-28-9
Published on

ಬಾಗಲಕೋಟೆ: ನವನಗರ ಯುನಿಟ್ -೩ ನಿರ್ಮಾಣಕ್ಕಾಗಿ ಭೂಸ್ವಾಽÃನ ಗೊಂಡಿರುವ ಭೂಮಿಗೆ ಯೋಗ್ಯ ನ್ಯಾಯ ಸಮ್ಮತ ಪರಿಹಾರಧನ ನೀಡಬೇಕು. ಅಲ್ಲಿವರೆಗೆ ಯುನಿಟ್ -೩ ಕಾಮಗಾರಿಗೆ ತಡೆ ಒಡ್ಡಲಾಗುವುದು ಎಂದು ಬಾಗಲಕೋಟೆ ರೈತರ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ರವಿ ಕುಮಟಗಿ, ರಾಜಶೇಖರ ರುದ್ರಾಕ್ಷಿ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ, ಮುಚಖಂಡಿ, ಶೀಗಿಕೇರಿ ಗ್ರಾಮದ ರೈತರು ತ್ಯಾಗಜೀವಿಗಳು ಅಂತ ಹೇಳುತ್ತಾರೆ. ಆದರೇ ವಾಸ್ತವ್ಯದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಯಾವ ಸರ್ಕಾರಗಳು ನ್ಯಾಯಯುತ ಬೆಲೆ ನೀಡುತ್ತಿಲ್ಲ. ರೈತರ ಬದುಕು ಬೀದಿಗೆ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮೂರು ಗ್ರಾಮಗಳ ರೈತರು ನವನಗರದ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡು ಸಂತ್ರಸ್ತರಾಗಿದ್ದರು. ಬೇರೆಡೆ ಭೂಮಿ ಖರೀ ದಿಸಿ ಬದುಕು ಕಟ್ಟಿಕೊಂಡಿದ್ದರು. ಯುನಿಟ್ -೩ ನಿರ್ಮಾಣಕ್ಕಾಗಿ ಆ ಭೂಮಿಯನ್ನು ಸ್ವಾಧೀನಕ್ಕೆ ಮುಂದಾದಾಗ ತಡೆ ನೀಡುವಂತೆ ಕೋರ್ಟ್ ಮೋರೆ ಹೋಗಲಾಗಿತ್ತು. ಆದರೆ ನ್ಯಾಯಾಲಯವು ಸ್ವಾಧೀನಕ್ಕೆ ತಡೆ ನೀಡಲಿಲ್ಲ. ನ್ಯಾಯಾಲಯದ ಆದೇಶಕ್ಕೆ ನಮ್ಮ ವಿರೋಧವಿಲ್ಲ. ಅಭಿವೃದ್ಧಿ ವಿರೋಧಿಗಳು ಕೂಡಾ ಅಲ್ಲ. ಆದರೆ ಸದ್ಯದ ಮಾರುಕಟ್ಟೆ ದರದ ಅನ್ವಯ ಯೋಗ್ಯ ಪರಿಹಾರ ಸರ್ಕಾರ ದೊರೆಕಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನೀಡಲು ಸರ್ಕಾರ ಬಿಟಿಡಿಎ ಮೂಲಕ ನೋಟಿಸ್ ನೀಡಿದೆ. ಆದರೆ ಸುತ್ತಮುತ್ತಲಿನ ಜಮೀನು ಎನ್‌ಎ ಮಾಡಿ ಚದುರಡಿಗೆ ಬೆಲೆಸಿಗುತ್ತಿದೆ. ನಮಗೆ ಅಲ್ಪ ಮೊತ್ತದ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಯುನಿಟ್-೩ ಕಾಮಗಾರಿ ನಿಲ್ಲಿಸುವಂತೆ ಹೋರಾಟ ಮಾಡಿದ್ದೇವೆ. ಏಕಕಾಲಕ್ಕೆ ನಮ್ಮ ಬೇಡಿಕೆಯಂತೆ ಭೂಸ್ವಾಧೀನ ರೈತರಿಗೆ ಪರಿಹಾರ ನೀಡಿದಲ್ಲಿ ಮಾತ್ರ ಕಾಮಗಾರಿಗೆ ಅಡ್ಡಿಪಡಿಸುವುದಿಲ್ಲ ಎಂದು ತಿಳಿಸಿದರು.

ಮುಖಂಡರಾದ ಈರಣ್ಣ ಬನ್ನಿ, ನಿಂಗಣ್ಣ ಗೋಡಿ, ನಿಂಗಣ್ಣ ಲಮಾಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net