

ಚನ್ನಗಿರಿ: ಭೂಮಿಯಲ್ಲಿ ಹಸಿರೆಲೆ ಗೊಬ್ಬರ ಹಾಗೂ ಹುರುಳಿ ಬೀಜಗಳನ್ನು ಬೆಳೆಸಿ ಮಣ್ಣಿನಲ್ಲಿ ಬೆರೆಯಲು ಬಿಟ್ಟರೆ ಸಾಕು ಅಧುನಿಕ ರಾಸಾಯನಿಕವನ್ನು ಭೂಮಿ ಬೇಡುವುದೇ ಇಲ್ಲ, ಸಾರಯುಕ್ತ ಮಣ್ಣನ್ನು ಖಚಿತವಾಗಿ ನೀಡುತ್ತದೆ ಎಂದು ನಿವೃತ್ತ ಕೃಷಿ ನಿರ್ದೇಶಕ ಎಸ್.ಬಿ.ರಾಜಶೇಖರ್ ತಿಳಿಸಿದರು.
ತಾಲೂಕಿನ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಗದ್ದೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೋಬಳಿ ಘಟಕದಿಂದ ಏರ್ಪಡಿಸಿದ್ದ ಕೆಸರು ಗದ್ದೆ ಓಟದ ಕೂಟವನ್ನು ಉದ್ಘಾಟಸಿ ಭಾನುವಾರ ಮಾತನಾಡಿದರು.
ಮನುಷ್ಯ ನೆಮ್ಮದಿಯ ಜೀವನ ನಡೆಸಲು ಭೂತಾಯಿಯ ಒಡನಾಟ ಅತ್ಯವಶ್ಯ, ನಿಷ್ಠೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಮನುಷ್ಯನ ವ್ಯಕ್ತಿತ್ವ ರೂಪಿಸುವ ಮಾರ್ಗಗಳು, ಮಣ್ಣಿನೊಂದಿಗೆ ನಾವುಗಳು ಬೆರೆತು ಕೆಲಸ ಮಾಡಿದಾಗ ನಮಗೆ ಬಿಳಿ ರಕ್ತ ಕಣಗಳು, ರೋಗ ನಿರೋಧಕ ಜೀವಾಣುಗಳನ್ನು ಅಧಿಕ ಪ್ರಮಾಣದಲ್ಲಿ ಪಡೆಯಬಹುದು, ಮಣ್ಣನ್ನು ಶುದ್ಧವಾಗಿ ಇಟ್ಟುಕೊಂಡರೆ ಭವಿಷ್ಯದಲ್ಲಿ ಮಾನವ ಜೀವಿಸಲು ಸಾಧ್ಯ, ಇಲ್ಲವೆಂದರೆ ವಿನಾಶ ಖಚಿತವಾಗಿದೆ. ಭೂಮಿ ಹುಟ್ಟಿನಿಂದ ಮನುಷ್ಯ ಜತೆಯಲ್ಲಿ ಬೆಳೆದು ಬಂದಿದ್ದಾನೆ ಎಂದರು.
ವಿಭಕ್ತ ಕುಟುಂಬಗಳಿಗಿಂತ ಅವಿಭಕ್ತ ಕುಟುಂಬಗಳು ಹೆಚ್ಚು ಗಟ್ಟಿ, ಗೋವಿನಾಮೃತ, ಜೀವಾಮೃತ, ಬೀಜಾಮೃತ ಜಲಗಳನ್ನು ಮಣ್ಣಿಗೆ ನೀಡುವುದರಿಂದ ಮಣ್ಣನ್ನು ಹೆಚ್ಚಾಗಿ ಫಲತ್ತಾಗಿ ಮಾಡಲು ಸಾಧ್ಯ, ಇಂದಿನ ಯುವಕರಿಗೆ ಮಣ್ಣಿನ ಸಾರ ತಿಳಿಸಲು ಇಂದು ಸಂಘದವರು ಕೆಸರು ಗದ್ದೆ ಆಟಗಳನ್ನು ಆಯೋಜಿಸಿದ್ದಾರೆ, ಇದರಲ್ಲಿ ಹೆಚ್ಚಾಗಿ ಪಾಲ್ಗೊಂಡರೆ ಆರೋಗ್ಯ ಹಾಗೂ ದೇಹ ದೃಢವಾಗಿಸುತ್ತದೆ ಎಂದು ಹೇಳಿದರು.
ಕೆಸರು ಗದ್ದೆಯಲ್ಲಿ ವಾಲಿಬಾಲ್, ಕಬಡ್ಡಿ, ಓಟ, ನಮಸ್ತೆ ಓಟ, ನಿಂಬೆಹಣ್ಣು ಬ್ಯಾಲೆನ್ಸ್ ಆಟ, ಹಗ್ಗ ಜಗ್ಗಾಟ ಹಾಗೂ ಉಪ್ಪಿನ ಮೂಟೆ ಓಟಗಳ ಜಾನಪದ ಆಟಗಳನ್ನು ನಡೆಸಲಾಯಿತು.
ಜಯಗಳಿಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಯುವಕರು ಮತ್ತು ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರಕ ಶ್ರೀ ಹರೀಶ್, ಜಿಲ್ಲಾ ಗೋಸೇವಾ ಪ್ರವಾಹಕ ಶಿವಲಿಂಗಯ್ಯ, ಚನ್ನಗಿರಿ ತಾಲೂಕು ಕಾರ್ಯವಾಹ ಯಶವಂತ್ ಕುಮಾರ್, ಕಾಯಿಸ್ವಾಮಿ, ರಮೇಶ, ಶಿಕ್ಷಕ ಮಾರುತಿ, ಮಂಜುನಾಥ್, ಹೋಬಳಿ ಕಾರ್ಯವಾಹ ಗೊಲ್ಲರಹಳ್ಳಿ ಬಿ.ಪ್ರಭು ಇದ್ದರು.