

ವಿಜಯಪುರ: ಕಳೆದೊಂದು ವರ್ಷದಿಂದ ನಿರಂತರವಾಗಿ ಭೂಕಂಪನವಾಗುತ್ತಿದ್ದು, ಈ ಬಗ್ಗೆ ಜನಜಾಗೃತಿ ಮೂಡಿಸಲು ಯುವ ಭಾರತ ವೇದಿಕೆ ಮುಂದಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ತಿಳಿಸಿದರು.
ನಗರ ಸೇರಿದಂತೆ ಜಿಲ್ಲಾದ್ಯಂತ ಯುವ ಭಾರತ ವೇದಿಕೆ ಪದಾಧಿಕಾರಿಗಳು ಹಾಗೂ ವಿವಿಧ ಸಾಮಾಜಿಕ ಕಾರ್ಯಕರ್ತರು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜಿಲ್ಲಾಡಳಿತ ಭೂಕಂಪನದ ಬಗ್ಗೆ ತಜ್ಞರಿಂದ ನಿಖರ ಕಾರಣ ತಿಳಿದು ಮುಂಜಾಗೃತೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು.ಈಗಾಗಲೇ ಜನ ಸಾಕಷ್ಟು ಭಯಭೀತರಾಗಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಜನರ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದರು.
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ತಜ್ಞರು ಭೇಟಿ ನೀಡಿ
ಭೂಕಂಪನಕ್ಕೆ ಎನ್ ಟಿಪಿಸಿ ಹಾಗೂ ಜಲಾಶಯ ಅಲ್ಲ ಎಂದು ವರದಿ ನೀಡಿದರು. ಹೆಚ್ಚು ಹೆಚ್ಚು ಕೊಳವೆ ಬಾವಿ ಕೊರೆಯಿಸುವುದರಿಂದ ಭೂಮಿಯ ಆಳದಲ್ಲಿ ಕಲ್ಲಿನ ಪದರುಗಳು ಒಡೆಯುತ್ತಿವೆ. ಈ ಬಗ್ಗೆ ಗಮನ ಹರಿಸಬೇಕೆಂದರು.
ಸಮಾಜ ಸೇವಕ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ನಿಸರ್ಗದ ವಿರುದ್ದ ಮಾನವ ಚಟುವಟಿಕೆಗಳು ನಡೆಯುತ್ತಿರುವ ಕಾರಣ ಇಂಥ ಅವಘಡಗಳು ಸಂಭವಿಸುತ್ತಿವೆ. ನೈಸರ್ಗಿಕ ಸಂಪನ್ಮೂಲಗಳು ಹಾಳಾಗಿವೆ. ಇಂದಿನ ಈ ಸಂದಿಗ್ಧ ಸ್ಥಿತಿಗೆ ಇದುವೇ ಕಾರಣ ಎಂದರು.
ಭೂಕಂಪನ ಕ್ಕೆ ಸಂಬಂಧಿಸಿದಂತೆ ಮಾತನಾಡಲು ನಾವು ತಜ್ಞರಲ್ಲ. ಆದರೆ ತಜ್ಞರನ್ನು ಕರೆಯಿಸಿ ಕಾರಣ ಮತ್ತು ಪರಿಹಾರ ಕಂಡುಕೊಳ್ಳಬೇಕೆಂದರು.
ಇನ್ನೋರ್ವ ಸಾಮಾಜಿಕ ಕಾರ್ಯಕರ್ತ ಮುನ್ನಾ ಭಕ್ಷಿ ಮಾತನಾಡಿ, ಭೂಕಂಪನದಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಆಡಳಿತ ಏನು ಮಾಡುತ್ತಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಪ್ರಕೃತಿ ವಿಕೋಪ ಪರಿಹಾರ ಕೇಂದ್ರದವರು ಈ ಬಗ್ಗೆ ಕೂಡಲೇ ಜನಜಾಗೃತಿಗೆ ಮುಂದಾಗಬೇಕು ಎಂದರು.